ಗೋಣಿಕೊಪ್ಪಲು, ಸೆ. 21: ನವೆಂಬರ್ ತಿಂಗಳಿನಲ್ಲಿ ಪೊನ್ನಪೇಟೆ ಯಲ್ಲಿ ನಡೆಯಲಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸರ್ವರೂ ಕೈಜೋಡಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ಅಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಉಳಿವಿಗಾಗಿ ಬೀದಿಗಿಳಿದು ಹೋರಾಟ ಮಾಡ ಬೇಕಾದ ಇಂದಿನ ಕಾಲಘಟ್ಟದಲ್ಲಿ ಕನ್ನಡ ಸಮ್ಮೇಳನ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೂಡ ಅಭಿಮಾನ ಹೆಚ್ಚಿದೆ. ಆದರೆ ಪಟ್ಟಣ ಪ್ರದೇಶದಲ್ಲಿ ಕನ್ನಡ ಅಭಿಮಾನಿಗಳು ವಿರಳ ಇದ್ದರೂ ಕೂಡ, ಪಟ್ಟಣದಲ್ಲಿ ಸಮ್ಮೇಳನ ನಡೆಸಿ ಕನ್ನಡ ರಕ್ಷಣೆಗೆ ಮುಂದಾಗಬೇಕಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಜಿಲ್ಲಾ ಸಮ್ಮೇಳನಕ್ಕೆ ರೂ. 5 ಲಕ್ಷ, ತಾಲೂಕು ಸಮ್ಮೇಳನಕ್ಕೆ ರೂ. 1 ಲಕ್ಷ ಅನುದಾನ ಘೋಷಿಸಿದಂತೆ ಇಂದೂ ಕೂಡ ಮುಂದುವರಿಯುತ್ತಿದೆ. ಹೆಚ್ಚಿಸುವಂತೆ ಒತ್ತಾಯವಿದ್ದರೂ ಕೂಡ ಅನುದಾನ ಹೆಚ್ಚಿಸಿಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಜಿಲ್ಲಾ ಸಮ್ಮೇಳನಕ್ಕೆ ಮುನ್ನ ವೀರಾಜಪೇಟೆ ಹಾಗೂ ಮಡಿಕೇರಿ ಸಮ್ಮೇಳನಗಳು ನಡೆಯ ಬೇಕಿದೆ. ಪೊನ್ನಂಪೇಟೆ ಭಾಗಗಳಲ್ಲಿ ಹೆಚ್ಚು ಕನ್ನಡ ಅಭಿಮಾನಿಗಳು ಜವಬ್ದಾರಿ ಹೊತ್ತುಕೊಳ್ಳುವ ಮೂಲಕ ಸಮ್ಮೇಳನದ ಯಶಸ್ವಿಗೆ ಮುಂದಾಗಬೇಕು ಎಂದರು.

ಅಕ್ಟೋಬರ್ 4 ರಂದು ಮಧ್ಯಾಹ್ನ 2.30 ಕ್ಕೆ ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ 2 ನೇ ಸುತ್ತಿನ ಪೂರ್ವಭಾವಿ ಸಭೆ ನಡೆಸುವಂತೆ ನಿರ್ಧರಿಸಲಾಯಿತು. ಡಾ. ಶಿವಪ್ಪ ಶೀಘ್ರವಾಗಿ ಸಮೇಳನಾಧ್ಯಕ್ಷ ಹೆಸರು ಘೋಷಣೆ ಮಾಡುವಂತೆ ಒತ್ತಾಯಿಸಿ ದರು. ಸಮ್ಮೇಳನ ಆಮಂತ್ರಣ ಮುದ್ರಣಕ್ಕೂ ಮುನ್ನ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಭೆ ನಡೆಸಿ ಹೆಸರು ಘೋಷಿಸಲಾಗುವದು ಎಂದು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು. ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸುಭಾಶ್ ನಾಣಯ್ಯ, ಇಒ ಕಿರಣ್ ಪೆಡ್ನೇಕರ್, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್ ಉಪಸ್ಥಿತರಿದ್ದರು. ಸಭೆಯಲ್ಲಿ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಡಾ. ಚಂದ್ರಶೇಖರ್, ಶ್ರೀಮಂಗಲ ಅಧ್ಯಕ್ಷ ರವಿ ಸುಬ್ಬಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಮಿತಿ ರಚನೆ: ಈ ಸಂದರ್ಭ ಸಮ್ಮೇಳನ ಯಶಸ್ವಿಯಾಗಿ ನಡೆಯಲು ವಿವಿಧ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿಗೆ ಮುಂದಿನ ಬಾರಿ ಮತ್ತಷ್ಟು ಸದಸ್ಯರುಗಳನ್ನು ಅಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಯಿತು.

ಸಮ್ಮೇಳನ ಕಾರ್ಯಧ್ಯಕ್ಷರಾಗಿ ಲೋಕೇಶ್ ಸಾಗರ್, ಪ್ರಧಾನ ಕಾರ್ಯದರ್ಶಿಯಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ರಾಯ್ ಪಡ್ನೇಕರ್, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಾಸಕ ಕೆ.ಜಿ. ಬೋಪಯ್ಯ, ಮಹಾಪೋಷಕರುಗಳಾಗಿ ಉಸ್ತುವಾರಿ ಸಚಿವ ಸೀತಾರಾಂ, ಶಾಸಕರುಗಳಾದ ವೀಣಾ ಅಚ್ಚಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ ಅವರುಗಳನ್ನು ಅಯ್ಕೆ ಮಾಡಲಾಯಿತು.

ವೇದಿಕೆ ಸಮಿತಿ ಅಧ್ಯಕ್ಷರಾಗಿ ಸಿ.ಕೆ. ಬೋಪಣ್ಣ, ಸಂಚಾಲಕರಾಗಿ ಡಾ. ಚಂದ್ರಶೇಖರ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾಗಿ ಡಾ. ಶಿವಪ್ಪ, ಸದಸ್ಯರು ಗಳಾಗಿ ಲೋಹಿತ್ ಭೀಮಯ್ಯ, ಸುಮಿ ಸುಬ್ಬಯ್ಯ, ಅಮ್ಮಣಿಚಂಡ ಪ್ರವೀಣ್ ಹಾಗೂ ರತಿ ಅಚ್ಚಪ್ಪ, ಧ್ವಜಾರೋಹಣ ಸಮಿತಿ ಅಧ್ಯಕ್ಷರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಣ್ಣುವಂಡ ಕಿಶೋರ್ ನಾಚಪ್ಪ, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಐಟಿಡಿಪಿ ಅಧಿಕಾರಿ ಚಂದ್ರಶೇಖರ್, ಸಂಚಾಲಕರುಗಳಾಗಿ ಇ.ಸಿ. ಜೀವನ್, ವಿಶ್ವನಾಥ್, ಹೆಚ್.ಎಂ. ಚಂದನ ಹಾಗೂ ಆಶಾ ಪೂಣಚ್ಚ.

ಅಲಂಕಾರ ಸಮಿತಿ ಅಧ್ಯಕ್ಷರಾಗಿ ಶ್ರೀಜಾ ಶಾಜಿ ಅಚ್ಯುತ್ತನ್, ಸಂಚಾಲಕಿ ಯಾಗಿ ಆಶಾ ಪೂಣಚ್ಚ, ಆಶಾ ಜೇಮ್ಸ್, ಕಡೇಮಾಡ ಕುಸುಮ ಜೋಯಪ್ಪ, ಮುಕ್ಕಾಟೀರ ವಿನಿತಾ ಕಾವೇರಪ್ಪ, ವಸತಿ ಮತ್ತು ಆತಿಥ್ಯ ಸಮಿತಿ ಅಧ್ಯಕ್ಷರಾಗಿ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ, ಕಾನೂನು ಸುವ್ಯವಸ್ಥೆ ಸಮಿತಿ ಅಧ್ಯಕ್ಷರಾಗಿ ಡಿವೈಎಸ್ಪಿ ನಾಗಪ್ಪ ಹಾಗೂ ಸಿಪಿಐ ಪಿ.ಕೆ. ರಾಜು, ಆರೋಗ್ಯ ಸಮಿತಿ ಅಧ್ಯಕ್ಷರಾಗಿ ಡಾ. ಯತಿರಾಜ್, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷೆಯಾಗಿ ಪ್ರೊ. ಸುಶೀಲ, ಸಂಚಾಲಕರಾಗಿ ಜಗದೀಶ್ ಜೋಡುಬೀಟಿ, ಸದಸ್ಯರಾಗಿ ಮುಲ್ಲೇಂಗಡ ರೇವತಿ ಪೂವಯ್ಯ, ನೈರ್ಮಲ್ಯ ಸಮಿತಿ ಅಧ್ಯಕ್ಷರಾಗಿ ಪೊನ್ನಂಪೇಟೆ ಗ್ರಾ.ಪಂ. ಪಿಡಿಓ, ಆರ್ಥಿಕ ಸಮಿತಿ ಅಧ್ಯಕ್ಷರಾಗಿ ನೆಲ್ಲೀರ ಚಲನ್, ಅಹಾರ ಸಮಿತಿ ಅಧ್ಯಕ್ಷರಾಗಿ ಮುದ್ದಿಯಡ ಮಂಜು, ಸಂಚಾಲಕ ಇ.ಸಿ. ಜೀವನ್ ಇವರುಗಳನ್ನು ಆಯ್ಕೆ ಮಾಡಲಾಯಿತು.