ವೀರಾಜಪೇಟೆ, ಸೆ. 22: ವೀರಾಜಪೇಟೆಯ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಆಶ್ರಯದಲ್ಲಿ 12ನೇ ವರ್ಷದ ಆಯುಧ ಪೂಜಾ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ತಾ. 29 ರಂದು ಅದ್ಧೂರಿಯಾಗಿ ಆಚರಿಸಲಾಗುವದು ಎಂದು ಬಸ್ ಕಾರ್ಮಿಕ ಸಂಘದ ಅಧ್ಯಕ್ಷ ಎನ್.ಪಿ. ದಿನೇಶ್ ನಾಯರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವಹ್ನ 10 ಗಂಟೆಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಾಮೂಹಿಕ ಆಯುಧ ಪೂಜೆ ನಡೆಯಲಿದೆ. ಅಪರಾಹ್ನ 3 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ, ಸಭೆಯ ಅಧ್ಯಕ್ಷತೆಯನ್ನು ಐಎನ್ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಮುಖ್ಯ ಅತಿಥಿಗಳಾಗಿ ಖಾಸಗಿ ಬಸ್ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಬಿ.ಆರ್. ಗಣೇಶ್, ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಪಟ್ಟಣ ಪಂಚಾಯಿತಿ ನಾಮಕರಣ ಸದಸ್ಯ ಮಹಮದ್ ರಾಫಿ ಭಾಗವಹಿಸಲಿದ್ದಾರೆ. ಅಪರಾಹ್ನ 3.30 ಗಂಟೆಗೆ ಕೂರ್ಗ್ ಬೈಕ್ ಸ್ಟಂಟರ್ಸ್ ಅವರಿಂದ ಬೈಕ್ ಸಾಹಸ ಪ್ರದರ್ಶನ ನಂತರ ಕಲಾ ಪ್ರತಿಭೆಗಳಿಂದ ಸಾಂಸಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಉಪಾಧ್ಯಕ್ಷ ಬಿ.ಜಿ. ನಾಗೇಶ್ ಮಾತನಾಡಿ, ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದಿನೇಶ್ ನಾಯರ್ ವಹಿಸಿಲಿದ್ದಾರೆ. ಮುಖ್ಯ ಅತಿಥಿಯಾಗಿ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಅಶೋಕ್ ಮೋಟಾರ್ಸ್ ಮಾಲೀಕ ಸತೀಶ್ ರೈ, ಬದ್ರಿಯಾಸ್ ಫ್ಯಾಮಿಲಿ ರೆಸ್ಟೋರೆಂಟ್ನ ಮಾಲೀಕ ಅಜೀಜ್, ವಿನಾಯಕ ಟೂರ್ಸ್ ಅಂಡ್ ಟ್ರಾವಲ್ಸ್ ಮಾಲೀಕ ಬಿ.ವಿ. ಹೇಮಂತ್, ಗೋಣಿಕೊಪ್ಪ ಸಿ.ಡಿ.ಎಂ. ಎಂಟರ್ಪ್ರೈಸಸ್ ಮಾಲೀಕ ಸಿ.ಡಿ. ಮಾದಪ್ಪ, ಕಾಫಿ ಬೆಳೆಗಾರ ಇಟ್ಟಿರ ಸಿದ್ದು, ಜೆ.ಡಿ.ಎಸ್. ಪಕ್ಷದ ವೀರಾಜಪೇಟೆ ತಾಲೂಕು ಅಧ್ಯಕ್ಷ ಎಸ್.ಹೆಚ್. ಮತೀನ್, ಬಿಜಿಪಿ ನಗರ ಅಧ್ಯಕ್ಷ ಅಂಜಪರವಂಡ ಅನೀಲ್ ಮಂದಣ್ಣ, ಉಪಸ್ಥಿತರಿರುವರು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಟಿ.ಎನ್. ಮಂಜುನಾಥ್ ಮಾತನಾಡಿ, ರಾತ್ರಿ ನಡೆಯುವ ಸಮಾರಂಭದಲ್ಲಿ ಸಂಜೆ ಹಿರಿಯ ಪತ್ರಕರ್ತ ಡಿ.ಎಂ. ರಾಜ್ಕುಮಾರ್, ನಿವೃತ ಬಸ್ ನಿರ್ವಾಹಕ ಬಲ್ಲಾಡಿಚಂಡ ಸೋಮಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಚಂದನಾ ಹಾಗೂ ಆಲೀಶಾ ವಾಝ್ ಇವರುಗಳನ್ನು ಸನ್ಮಾನಿಸಲಾಗುವದು. ತಾ. 24 ರಂದು ಬೆಳಿಗ್ಗೆ 10 ಗಂಟೆಗೆ ವೀರಾಜಪೇಟೆ ಮಲಬಾರ್ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಜೂಡಿವಾಝ್, ಲೋಕೇಶ್ ರೈ, ಎ.ಪಿ. ಗಣೇಶ್, ಎಂ.ವಿ. ಅಜೀತ್ ಉಪಸ್ಥಿತರಿದ್ದರು.