ಸೋಮವಾರಪೇಟೆ, ಸೆ. 22 : ಸಮೀಪದ ದೊಡ್ಡಮಳ್ತೆ ಗ್ರಾ. ಪಂ. ವ್ಯಾಪ್ತಿಯ ದೊಡ್ಡಹಣಕೋಡು ಗ್ರಾಮದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಕಳಪೆಯಾದ ಪರಿಣಾಮ ಗ್ರಾಮದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ಅಧ್ಯಕ್ಷ ಸುಳಿಮಳ್ತೆ ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ದೊಡ್ಡಹಣಕೋಡಿನಲ್ಲಿ ಒವರ್‍ಹೆಡ್ ಟ್ಯಾಂಕ್ ನಿರ್ಮಿಸಿ ಮೂರು ವರ್ಷಗಳು ಕಳೆದಿದ್ದರೂ ಸಹ ಇಂದಿಗೂ ಪೈಪ್‍ಲೈನ್ ಆಗಿಲ್ಲ. ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ಗ್ರಾಮ ಪಂಚಾಯಿತಿ ಯಿಂದ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಗ್ರಾಮಸ್ಥರಾದ ಗೋಪಾಲಕೃಷ್ಣ ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಗ್ರಾಮಸ್ಥರಾದ ಯತೀಶ್ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಟ್ಯಾಂಕ್ ಸೋರುತ್ತಿದೆ. ಜಿಲ್ಲಾ ಪಂಚಾಯಿತಿ ಹಣ ಪೋಲಾಗಿದೆ. ಆದರೂ ಸಂಬಂಧಪಟ್ಟ ವರು ಮೌನವಾಗಿದ್ದಾರೆ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಲತಾ, ಗ್ರಾಮೀಣ ಕುಡಿಯುವ ನೀರು ಇಲಾಖೆಯಿಂದ ಕಾಮಗಾರಿ ನಡೆದಿದೆ. ಕಾಮಗಾರಿ ಪೂರ್ಣಗೊಳ್ಳದೆ ಪಂಚಾಯಿತಿ ಸುಪರ್ದಿಗೆ ನೀರಿನ ಘಟಕವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಗ್ರಾಮಸಭೆ ಅನುಮತಿ ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದರು.

ಕಾಮಗಾರಿ ಕಳಪೆಯಾಗಿರುವ ಬಗ್ಗೆ ಹಾಗೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನೀರು ಘಟಕವನ್ನು ಪಂಚಾಯಿತಿ ಸುಪರ್ದಿಗೆ ತೆಗೆದು ಕೊಳ್ಳಬಾರದು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ದೂರು ನೀಡುವಂತೆ ಗ್ರಾಮಸಭೆ ಸೂಚಿಸಿತು.

ಹೊನವಳ್ಳಿ ಕಾಲೋನಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸುವಂತೆ ಮಹಿಳೆಯರು ಮನವಿ ಮಾಡಿದರು. ಬೆಳೆಹಾನಿ ಪರಿಹಾರ ಹಣ ಸಿಗದ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು. ಅನುದಾನವಿಲ್ಲದ ಕಾರಣ ಬಹಳಷ್ಟು ರೈತರ ಖಾತೆಗೆ ಹಣ ಜಮೆ ಮಾಡಿಲ್ಲ. ಅನುದಾನ ಸಿಕ್ಕಿದ ತಕ್ಷಣ ಪರಿಹಾರ ಹಣ ನೀಡಲಾಗುವದು ಎಂದು ಕೃಷಿ ಅಧಿಕಾರಿ ಮಂಜುನಾಥ್ ಹೇಳಿದರು.

ದೊಡ್ಡಮಳ್ತೆ ಗ್ರಾಮದ ದಲಿತರ ಕಾಲನಿಗೆ ಸಮರ್ಪಕ ರಸ್ತೆಯಿಲ್ಲ. ತಕ್ಷಣ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿದರು. ರಸ್ತೆ ಕಿರಿದಾಗಿರುವದರಿಂದ ರಸ್ತೆ ಕಾಮಗಾರಿ ಕೈಗೊಂಡಿಲ್ಲ. ಈಗಾಗಲೆ 1.50ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಕಂದಾಯ ಇಲಾಖೆಯವರ ಸಹಕಾರದಿಂದ ರಸ್ತೆ ಅಗಲೀಕರಣ ಗೊಂಡ ನಂತರ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಅಧ್ಯಕ್ಷ ದಿವಾಕರ್ ಭರವಸೆ ನೀಡಿದರು.

ಸಭೆಯಲ್ಲಿ ತಾ.ಪಂ. ಸದಸ್ಯೆ ಕುಸುಮಾ ಅಶ್ವಥ್, ಪಂಚಾಯಿತಿ ಉಪಾಧ್ಯಕ್ಷೆ ಕವಿತಾ, ನೋಡಲ್ ಅಧಿಕಾರಿ ಸಂಪತ್ ಕುಮಾರ್, ಸದಸ್ಯರಾದ ಶಿವನಂಜಪ್ಪ, ಸಂದೇಶ್, ಕುಸುಮಾವತಿ, ಸೋಮಕ್ಕ, ಸುಮಾ, ಈಶ್ವರಿ, ಕಾರ್ಯದರ್ಶಿ ಬಿ.ಎಸ್.ಸುರೇಶ್ ಉಪಸ್ಥಿತರಿದ್ದರು.