ಮಡಿಕೇರಿ, ಸೆ. 22: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಗಾಳಿಬೀಡು ಮೂಲಕ ಕಡಮಕಲ್ಗಾಗಿ ಸುಬ್ರಹ್ಮಣ್ಯಕ್ಕೆ ತೆರಳಲು ರಸ್ತೆ ಸಂಪರ್ಕಕ್ಕೆ ಬೇಡಿಕೆ ಮುಂದಿಟ್ಟು, ಕಡಮಕಲ್ ಹಾಗೂ ಬಾಳುಗೋಡು ಗ್ರಾಮಸ್ಥರು ಮಡಿಕೇರಿ ಉಪವಿಭಾಗದ ಪುಷ್ಪಗಿರಿ ಅರಣ್ಯ ವಲಯಾಧಿಕಾರಿ ಮರಿಸ್ವಾಮಿ ಹಾಗೂ ಸಿಬ್ಬಂದಿಗೆ ಇಂದು ದಿಗ್ಬಂಧನ ವಿಧಿಸಿದ ಘಟನೆ ನಡೆದಿದೆ.
ಕಡಮಕಲ್ ಮಾರ್ಗಕ್ಕೆ ಅರಣ್ಯ ಇಲಾಖೆ ಅವಕಾಶ ನೀಡುವ ತನಕ ಸುಳ್ಯ ಮಾರ್ಗದಿಂದ ಬಾಳುಗೋಡು ವನ್ಯ ಪ್ರದೇಶದಲ್ಲಿ ಇಲಾಖೆಯ ವಾಹನ ಸಂಚಾರಕ್ಕೆ ಅವಕಾಶ ನೀಡುವದಿಲ್ಲವೆಂದು ಇಂದು ಅಲ್ಲಿನ ಗ್ರಾ.ಪಂ. ಸದಸ್ಯರ ಸಹಿತ ಗ್ರಾಮಸ್ಥರು ಮಧ್ಯಾಹ್ನ 2 ರಿಂದ ಸಂಜೆ 7 ಗಂಟೆ ತನಕ 5 ಗಂಟೆಗಳ ಕಾಲ ದಿಗ್ಬಂಧನ ವಿಧಿಸಿ ಪ್ರತಿಭಟಿಸಿದ್ದಾರೆ.
ಸಂಜೆಯಾಗುತ್ತಿದ್ದಂತೆ ಸಾವಿರಾಗು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರಿಂದ ಅರಣ್ಯ ಸಿಬ್ಬಂದಿ ಪಾರಾಗಲಾರದ ಸನ್ನಿವೇಶ ನಿರ್ಮಾಣವಾಗಿದ್ದು, ಸುಬ್ರಹ್ಮಣ್ಯ, ಸುಳ್ಯ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರ ಸಹಕಾರದಿಂದ ಕೊನೆಗೂ ಘಟನೆ ಸ್ಥಳದಿಂದ ಮುಕ್ತಿ ಪಡೆದಿದ್ದಾರೆ. ಈ ಹಿಂದೆ ಪುಷ್ಪಗಿರಿ ವನ್ಯಜೀವಿ ವಿಭಾಗದ ಗಸ್ತು ತೆರಳಿದ ಸಂದರ್ಭ ಕೂಡ ವಾಹನ ಸಾಗಲು ಅಡ್ಡಿಪಡಿಸಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಪೊಲೀಸ್ ಇಲಾಖೆಗೆ ಗ್ರಾಮಸ್ಥರ ವಿರುದ್ಧ ದೂರು ಸಲ್ಲಿಸುರವದಾಗಿ ತಿಳಿದು ಬಂದಿದೆ.