ಕರಿಕೆ, ಸೆ. 22: ಗ್ರಾಮದ ಚೆತ್ತುಕಾಯದ ಪಚ್ಚೆಪಿಲಾವು ಎಂಬಲ್ಲಿ ಚಿರತೆಯೊಂದು ರಾತ್ರಿವೇಳೆ ನಾಯಿಗಳನ್ನು ಬೇಟೆಯಾಡುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಪಚ್ಚೆಪಿಲಾವು ಸುತ್ತಮುತ್ತಲಿನಲ್ಲಿ ಏಳೆಂಟು ನಾಯಿಗಳು ಚಿರತೆಗೆ ಆಹಾರವಾಗಿದ್ದು, ಮನೆಯ ಸಮೀಪ ಮಲಗಿದ್ದ ನಾಯಿಗಳನ್ನು ರಾತ್ರಿ ವೇಳೆ ಚಿರತೆ ಬೇಟೆಯಾಡುತ್ತಿದೆ. ಕೆಲವು ನಾಯಿಗಳು ಗಾಯಗೊಂಡು ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿವೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಉಪವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ ಹಾಗೂ ಆರ್.ಆರ್.ಟಿ ತಂಡದ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಚಿರತೆ ಓಡಾಟದ ಸುಳಿವು ದೊರೆತಿಲ್ಲ. ಮುಂದೆ ಉಂಟಾಗಬಹುದಾದ ಅನಾಹುತವನ್ನು ತಪ್ಪಿಸಲು ತುರ್ತು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಇಲಾಖೆಯನ್ನು ಆಗ್ರಹಿಸಿದ್ದಾರೆ.