ಸುರೇಶ್ ಚಂಗಪ್ಪ
ಗೋಣಿಕೊಪ್ಪಲು, ಸೆ. 22: ಸರ್ಕಾರ ಸಹಯೋಗದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆಸುತ್ತಿರುವ ಪೋಲಿಯೋ ನಿರ್ಮೂಲನಾ ಅಭಿಯಾನ ಯಶಸ್ವಿಯಾಗುತ್ತಿರುವದು ಸಂತೋಷದ ವಿಷಯವಾಗಿದೆ ಎಂದು ರೋಟರಿ ಗವರ್ನರ್ ಸುರೇಶ್ ಚಂಗಪ್ಪ ಹೇಳಿದರು.
ರೋಟರಿ ಸದಸ್ಯರು ಹಣ ಹೊಂದಿಸಿ ಪೋಲಿಯೋ ನಿರ್ಮೂಲ ನೆಗೆ ಪಣ ತೊಟ್ಟಿರುವದರಿಂದ ದೇಶದಲ್ಲಿ ಪೋಲಿಯೋ ನಿರ್ಮೂಲನೆಯತ್ತ ದಾಪುಗಾಲು ಹಾಕಲು ಕಾರಣವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಗ್ಯ, ಶಿಕ್ಷಣ, ತಾಯಿ ಮತ್ತು ಮಕ್ಕಳ ರಕ್ಷಣೆ ಹಾಗೂ ಪ್ರಕೃತಿ ವಿಕೋಪ ಸಂದರ್ಭ ತುರ್ತು ಸೇವೆ ನೀಡಲು ಸಂಸ್ಥೆ ಕಳೆದ ಶತಮಾನದಿಂದ ದುಡಿಯುತ್ತಿದೆ. ಇದರಂತೆ ಸರ್ಕಾರದೊಂದಿಗೆ ಕೈಜೋಡಿಸಿ ಪೋಲಿಯೋ ನಿರ್ಮಾಲನೆಗೆ ಸೇವೆ ನೀಡುತ್ತಿದೆ. ದೇಶದಲ್ಲಿ 2 ಲಕ್ಷ ಶೌಚಗೃಹ ನಿರ್ಮಾಣ, ಕೊಡಗು, ಚಾಮರಾಜನಗರ, ಮೈಸೂರು, ಮಂಗಳೂರು ಜಿಲ್ಲೆಗಳಲ್ಲಿ ಒಂದು ಕುಟುಂಬಕ್ಕೆ 4 ಸೋಲಾರ್ ಲ್ಯಾಂಪ್ ವಿತರಿಸುವ ಮೂಲಕ 2 ಸಾವಿರ ಕುಟುಂಬಗಳಿಗೆ ಬೆಳಕು ನೀಡಲು ಮುಂದಾಗಿದೆ. ಇದಕ್ಕಾಗಿ ನಮಗೆ ಬೇರೆ ಮೂಲದ ಯಾವದೇ ಆರ್ಥಿಕ ಕ್ರೋಢೀಕರಣವಾಗುವದಿಲ್ಲ. ಪ್ರಪಂಚದ 12.5 ಲಕ್ಷ ರೋಟರಿ ಸದಸ್ಯರು ತಮ್ಮ ವಂತಿಗೆ ನೀಡುವ ಮೂಲಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಪ್ರಸ್ತುತ ಮೂರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ವೈಜ್ಞಾನಿಕ ಕುಲುಮೆ ಮೂಲಕ ಸ್ಯಾನಿಟರಿ ವಿಲೇವಾರಿ ಮಾಡುವದು ಮುಖ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ 1 ಲಕ್ಷ ಗಿಡಗಳ ಪೋಷಣೆ ಹಾಗೂ ಸ್ವಚ್ಛ ಭಾರತ ಅಭಿಯಾನ ನಡೆಯುತ್ತಿದೆ ಎಂದರು.
ಗೋಷ್ಠಿಯಲ್ಲಿ ಗೋಣಿಕೊಪ್ಪ ರೋಟರಿ ಅಧ್ಯಕ್ಷ ಮಚ್ಚಮಾಡ ವಿಜಯ್, ಕಾರ್ಯದರ್ಶಿ ದಿಲನ್ ಚೆಂಗಪ್ಪ, ಸಹಾಯಕ ರಾಜ್ಯಪಾಲ ಮಹೇಶ್ ನೆಲ್ವಾಡೆ, ಲೆಫ್ಟಿನೆಂಟ್ ಹರಿ ಪ್ರಸಾದ್ ಉಪಸ್ಥಿತರಿದ್ದರು.