ಮಡಿಕೇರಿ, ಸೆ.22 : ಪ್ರಜಾಪ್ರಭುತ್ವ ಬಲಪಡಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಆ ನಿಟ್ಟಿನಲ್ಲಿ ಮಾಧ್ಯಮಗಳು ಸಮಾಜ ಮುಖಿಯಾಗಿ ಕಾರ್ಯನಿರ್ವ ಹಿಸಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಪ್ರಜಾಸತ್ಯ ದಿನಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಪ್ಪನ್ನು ನೇರವಾಗಿ ಹೇಳುವಂತಾಗಬೇಕು. ಜಿಲ್ಲೆಯಲ್ಲಿ ಆದಿವಾಸಿಗಳು ಸೇರಿದಂತೆ ಎಲ್ಲಾ ಬಡವರಿಗೂ ಮೂಲ ಸೌಲಭ್ಯಗಳು ತಲುಪಬೇಕು. ಆ ನಿಟ್ಟಿನಲ್ಲಿ ಸಮಾಜದ ಒಳಿತಿಗೆ ಬೆಳಕು ಚೆಲ್ಲುವಂತಾಗಬೇಕು ಎಂದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಮಾಧ್ಯಮಗಳು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಸಮಾಜಕ್ಕೆ ಸತ್ಯ ಹೇಳಬೇಕು. ಒಳ್ಳೆಯ ಕೆಲಸ ಮಾಡಿದವರನ್ನು ಪ್ರೋತ್ಸಾಹಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ತಪ್ಪು ಮಾಡಿದಾಗ ತಿದ್ದುವ ಕೆಲಸ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಮಾಜದ ಅಭಿವೃದ್ಧಿಗೆ ಮಾಧ್ಯಮಗಳ ಪಾತ್ರ ದೊಡ್ಡದು, ಆ ದಿಸೆಯಲ್ಲಿ ಮಾಧ್ಯಮಗಳು ಸಮಾಜದ ಕನ್ನಡಿಯಾಗಿವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ವಿವಿಧ ಕೇತ್ರಗಳಲ್ಲಿ ಸ್ಪರ್ಧೆ ಇರುವಂತೆ ಮಾಧ್ಯಮ ಕ್ಷೇತ್ರದಲ್ಲಿಯೂ ಸ್ಪರ್ಧೆ ಇದ್ದು, ಸ್ಪರ್ಧೆ ಮತ್ತು ಒತ್ತಡದ ನಡುವೆಯೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
‘ಶಕ್ತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಮಾತನಾಡಿ, ಪತ್ರಿಕೆಗಳನ್ನು ಜಾಹೀರಾತು ಇಲ್ಲದೆ ನಡೆಸುವದು ಕಷ್ಟ ಸಾಧ್ಯ ಎಂದರು.
ಮೈಸೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅವರು ಓದುಗರಿಗೆ ಗುಣಾತ್ಮಕ ಮತ್ತು ಮೌಲ್ಯಯುತ ಸುದ್ದಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕ ಮತ್ತು ವ್ಯವಸ್ಥಾಪಕ ಡಾ. ಬಿ.ಸಿ.ನವೀನ್ ಕುಮಾರ್ ಅವರು ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಲ್ಲಿಯೂ ಆಶಾಭಾವನೆ ಇರಬೇಕು. ಹಾಗಾದಾಗ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾವೇರಿ ಟೈಮ್ಸ್ ದಿನಪತ್ರಿಕೆಯ ಸಂಪಾದಕ ಬಿ.ಸಿ.ನಂಜಪ್ಪ ಅವರು ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುವಂತಾಗಲಿ ಎಂದರು.
ಹಾಸನದ ಜನಮಿತ್ರ ಪತ್ರಿಕೆಯ ಪ್ರಧಾನ ಸಂಪಾದಕರಾದ ಮದನ್ ಗೌಡ ಮತ್ತು ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿದರು.
ಡಾ.ಮನೋಹರ್ ಜಿ.ಪಾಟ್ಕರ್, ಬಿ.ಎ. ಷಂಶುದ್ದೀನ್, ಬಾಚರಣಿಯಂಡ ಅಪ್ಪಣ್ಣ, ಡಾ.ಎಸ್.ವಿ. ನರಸಿಂಹನ್, ಸುನಿಲ್ ಪೊನ್ನೇಟ್ಟಿ, ಪಿ.ಇ.ನಂದ, ಕೆ.ರಾಮಚಂದ್ರ, ಪೊನ್ನಚೆಟ್ಟೀರ ಸುರೇಶ್ ಸುಬ್ಬಯ್ಯ, ಮಂದ್ರೀರ ತೇಜಸ್ ನಾಣಯ್ಯ, ಮುರುಗೇಶ್, ಎಂ.ಹೆಚ್.ಮಹಮ್ಮದ್ ಮುಸ್ತಫ, ಚೇಂದಿರ ನಿರ್ಮಲ ಬೋಪಣ್ಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಹಾಸನದ ಜನಮಿತ್ರ ವ್ಯವಸ್ಥಾಪಕ ಸಂಪಾದಕ ಸಿ.ಆರ್.ನವೀನ್, ಪತ್ರಕರ್ತ ಬಿ.ಸಿ.ದಿನೇಶ್ ಇತರರು ಇದ್ದರು. ಸುಮಿತ್ರ ನಿರೂಪಿಸಿ ವಂದಿಸಿದರು.