ಸೋಮವಾರಪೇಟೆ, ಸೆ. 22 : ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ.5.99 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಅರಣ್ಯದಿಂದ ಕಾಜೂರುವರೆಗಿನ ರಸ್ತೆ ಕಳಪೆಯಾಗಿದೆ ಎಂಬ ಆರೋಪ ವ್ಯಕ್ತಗೊಂಡ ಹಿನ್ನೆಲೆ, ಪರಿಶೀಲನೆಗೆ ಆಗಮಿಸಿದ ಅಧಿಕಾರಿಗಳ ತಂಡವನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ರಸ್ತೆ ಕಾಮಗಾರಿಯನ್ನು ಪಿಎಂಜಿಎಸ್ವೈ ಅಭಿಯಂತರರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬಿಲ್ ಪಾವತಿಸಿ ಕಾಟಾಚಾರಕ್ಕೆ ಭೇಟಿ ನೀಡಿ ನಾಟಕವಾಡುತ್ತಿದ್ದೀರಾ? ಎಂದು ಖಾರವಾಗಿ ಪ್ರಶ್ನಿಸಿದರು. ಇದೇ ಸಂದರ್ಭ ರಸ್ತೆ ಕಾಮಗಾರಿಯ ಅಸಲಿ ಬಣ್ಣವನ್ನು ಬಯಲು ಮಾಡಿದರು.
ಪಿಎಂಜಿಎಸ್ವೈ ಜಿಲ್ಲಾ ಕಾರ್ಯಪಾಲಕ ಅಭಿಯಂತರ ರಾಮಚಂದ್ರ ಸೇರಿದಂತೆ ಇತರ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್.ಚಂಗಪ್ಪ, ಆರ್ಟಿಐ ಕಾರ್ಯಕರ್ತ ಬಗ್ಗನ ಅನಿಲ್, ತಾಪಂ ಸದಸ್ಯೆ ಸಬಿತ ಚನ್ನಕೇಶವ ಹಾಗೂ ಗ್ರಾಮಸ್ಥರು ರಾಮಚಂದ್ರ, ಪ್ರಭು ಹಾಗೂ ಭೀಮಯ್ಯ ತಂಡವನ್ನು ತರಾಟೆಗೆ ತೆಗೆದುಕೊಂಡರು.
ಈಗಾಗಲೇ ರೂ.3.50ಕೋಟಿ ಹಣ ಬಿಡುಗಡೆ ಮಾಡಿದ್ದೀರಿ. ಹಣ ಪಾವತಿಗೂ ಮುನ್ನಾ ಗುಣಮಟ್ಟ ಪರಿಶೀಲನೆ ನಡೆಸಿಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಪಿ.ರಾಯ್, ಗ್ರಾಮಸ್ಥರಾದ ಮಚ್ಚಂಡ ಪ್ರಕಾಶ್, ರಾಮಪ್ಪ, ಅಶೋಕ್, ಯೋಗೇಶ್, ಆರ್ಟಿಐ ಕಾರ್ಯಕರ್ತ ಸುಬ್ರಮಣಿ ಮತ್ತಿತರರು ಪ್ರಶ್ನಿಸಿದರು.
ಇವರೊಂದಿಗೆ ತಲ್ತರೆ ಹರೀಶ್, ಗ್ರಾಮಸ್ಥರಾದ ಈರಪ್ಪ, ಚನ್ನಕೇಶವ, ಯೋಗೇಶ್, ಚಂದ್ರ ಮತ್ತಿರರರು ದನಿಗೂಡಿಸಿದರು. ಮುಂದಿನ ಹದಿನೈದು ದಿನಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಷೋಲ್ಡರ್ ನಿರ್ಮಿಸುವದು, ಕೊಂಬೆಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವದು ಹಾಗೂ ಚರಂಡಿಗಳ ನಿರ್ಮಾಣ ಕಾರ್ಯ ಆರಂಭಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಯಡವನಾಡು ಅರಣ್ಯದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ಸಂದರ್ಭ ದೂರುದಾರ ಅನಿಲ್ಕುಮಾರ್ ಹಾಗೂ ಸಂಗಡಿಗರು ಬರಿಗೈನಿಂದ ರಸ್ತೆಯನ್ನು ಅಭಿಯಂತರರಿಗೆ ತೋರಿಸಿದರು.
ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಪಿಎಂಜಿಎಸ್ವೈ ಜಿಲ್ಲಾ ಕಾರ್ಯಪಾಲಕ ಅಭಿಯಂತರ ರಾಮಚಂದ್ರ, ಮೆಲ್ನೋಟಕ್ಕೆ ರಸ್ತೆ ಕಾಮಗಾರಿ ಕಳಪೆಯಾಗಿರುವದು ಕಂಡುಬಂದಿದೆ. ಗುಣಮಟ್ಟ ಪರಿಶೀಲನೆ ನಡೆಸಿದ ನಂತರ ಕ್ರಮ ಕೈಗೊಳ್ಳಲಾಗುವದು ಎಂದರು.