ಮಡಿಕೇರಿ, ಸೆ. 22: ಕೊಡಗು ಶಿಕ್ಷಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಕೆ.ಕೆ. ಮಂಜುನಾಥ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು ಪ್ರತಿಷ್ಠಿತ ಸಹಕಾರಿಯ ಅಧ್ಯಕ್ಷನಾಗಿರುವದು ತನ್ನ ಪಾಲಿಗೆ ಸುದೈವ ಎಂದ ಅವರು ಈ ಸಹಕಾರಿಯು ವಿದ್ಯಾ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವ ಎಲ್ಲರ ಅಭಿಮಾನದಿಂದ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಹೊಂದುತ್ತಾ, ಮುಂದುವರಿಯುತ್ತಿದೆ ಎಂದು ನುಡಿದರು.
ಈಗ ಸಹಕಾರಿಯಲ್ಲಿ 2,646 ಸದಸ್ಯರಿದ್ದು, ಸರಕಾರದ ಯಾವದೇ ಸಹಾಯವಿಲ್ಲದೇ ತನ್ನ ಸ್ವಂತ ಬಂಡ ವಾಳದಿಂದ ವ್ಯವಹರಿಸುತ್ತಿರುವ ಈ ಸಂಸ್ಥೆಯ ಪಾಲು ಬಂಡವಾಳ ರೂ. 2,22,40,150/- ಇರುತ್ತದೆ. ಒಟ್ಟು ವ್ಯವಹಾರವು 27 ಕೋಟಿಗೂ ಮೀರಿದ್ದು, ಠೇವಣಿಗಳು ಒಟ್ಟು ರೂಪಾಯಿ 10,11,46,741/-ಇರುತ್ತದೆ ಎಂದು ತಿಳಿಸಿದರು.
ಸಹಕಾರಿಯಲ್ಲಿ ಸದಸ್ಯರಿಗೆ ಶೇ. 13.5 ದರದಲ್ಲಿ ರೂ.2,00,000/-ದ ವರೆಗೆ ಜಾಮೀನು ಸಾಲ, 12% ದರದಲ್ಲಿ ರೂ. 10,00,000/- ದ ವರೆಗೆ ಗೃಹ ಸಾಲ, ರೂ. 50,000/-ದ ವರೆಗೆ ತುರ್ತು ಸಾಲ, ಶೇ. 15 ದರದಲ್ಲಿ ರೂ. 5,00,000/-ದ ವರೆಗೆ ವಾಹನ ಸಾಲ ನೀಡಲಾಗುತ್ತಿದೆ. ಕಳೆದ ಮಹಾಸಭೆಯ ತೀರ್ಮಾನದಂತೆ ನಿವೃತ್ತ ಶಿಕ್ಷಕರಿಗೂ ರೂ. 1,00,000/-ದ ವರೆಗೆ ಸಾಲ ನೀಡುತ್ತಿದ್ದೇವೆ. ಸಹಕಾರಿಯಲ್ಲಿ ಸದಸ್ಯರಿಗೆ ಹಾಗೂ ನಾಮ ಮಾತ್ರ ಸದಸ್ಯರಿಗೆ ಆರ್.ಡಿ., ಪಿಗ್ಮಿ ಹಾಗೂ ಎಸ್.ಬಿ. ಖಾತೆಗಳ ಸೌಲಭ್ಯಗಳನ್ನು ಒದಗಿಸಲಾಗಿದೆ.
ಸಹಕಾರಿಯಲ್ಲಿ ನಿರಖು ಠೇವಣಿಗೆ ಸಾಮಾನ್ಯ ಸದಸ್ಯರಿಗೆ ಶೇ. 8.5 ರಂತೆ ಹಾಗೂ ಹಿರಿಯ ಸದಸ್ಯರಿಗೆ ಶೇ. 9 ರಂತೆ ಬಡ್ಡಿ ನೀಡಲಾಗುತ್ತಿದೆ. ಸಾಮಾನ್ಯ ಕ್ಷೇಮ ನಿಧಿಯಿಂದ ವರ್ಷಂಪ್ರತೀ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದರು.
ವರ್ಷದಲ್ಲಿ ರೂ. 4,52,64,000/-ಜಾಮೀನು ಸಾಲ, ರೂ. 1,13,62,400/- ಆಭರಣ ಅಡವು ಸಾಲ, 7,50,000/- ನಿರಖು ಠೇವಣಿ ಮೇಲಿನ ಸಾಲ, ರೂ. 14,00,000/- ಗೃಹ ಸಾಲ, ರೂ. 1,55,655/-ವಾಹನ ಸಾಲ, ರೂ. 1,53,85,000/-ಪಿಗ್ಮಿ ಠೇವಣಿಗಳ ಮೇಲಿನ ಸಾಲ ಹೀಗೆ ಒಟ್ಟು ರೂ. 7,43,17,055/- ಸಾಲ ವಿತರಿಸಲಾಗಿದೆ.
ವರದಿ ವರ್ಷದಲ್ಲಿ ರೂ. 5,99,79,926/-ಸಾಲ ವಸೂಲಿ ಮಾಡಲಾಗಿದೆ. ಸಾಲ ವಸೂಲಾತಿಗೆ ಶಿಕ್ಷಕರ ಮನವೊಲಿಸಿ ವಸೂಲಾತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಕಳೆದ ವರ್ಷಾಕ್ಕಿಂತ ಈ ಸಾಲಿನಲ್ಲಿ ರೂ. 15,47,813 ಆದಾಯ ಅಧಿಕವಾಗಿದ್ದು, ಸಹಕಾರಿಯು ವರದಿ ವರ್ಷದಲ್ಲಿ ರೂ.21,04,099 ಒಟ್ಟು ನಿವ್ವಳ ಲಾಭಗಳಿಸಿದೆ ಎಂದರು.
ಮಹಾಸಭೆಯಲ್ಲಿ ವಿದ್ಯಾ ಇಲಾಖೆಯ ಕುಟುಂಬಗಳ ಸದಸ್ಯರಿಗೆ ಮಾತ್ರ ಸಹಕಾರ ಸಂಸ್ಥೆಯಲ್ಲಿ ಉದ್ಯೋಗ ಕಲ್ಪಿಸುವದು, ಮರಣ ನಿಧಿಯನ್ನು ಸದಸ್ಯರು ಮೃತಪಟ್ಟ ದಿನವೇ ಕುಟುಂಬಕ್ಕೆ ತಲಪಿಸಲು ನಿರ್ಧರಿಸಲಾಯಿತು.
ಶಿಕ್ಷಕರುಗಳಾದ ಶ್ರೀಧರ್ ನಿರೂಪಿಸಿ, ಮೀನಾಕ್ಷಿ ಪ್ರಾರ್ಥಿಸಿ, ಹಿರಿಯರಾದ ಎ.ಡಿ. ಸೋಮಯ್ಯ, ಪ್ರಕಾಶ್, ಉಮಾವತಿ, ಸೋಮಪ್ಪ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷೆ ರೇವತಿ ರಮೇಶ್ ವಂದಿಸಿದರು.