ಶ್ರೀಮಂಗಲ, ಸೆ. 22 : ಕೊಡಗು ಜಿಲ್ಲೆಯ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವಿಯೆಟ್ನಾಂ ಕರಿಮೆಣಸನ್ನು ತಂದು ಸ್ಥಳೀಯ ಕರಿಮೆಣಸಿನೊಂದಿಗೆ ಕಲಬೆರಕೆ ಮಾಡಿರುವ ಪ್ರಕರಣ ಸೇರಿದಂತೆ ಹಲವು ಅವ್ಯವಹಾರದ ಬಗ್ಗೆ ಈಗಾಗಲೇ ಭ್ರಷ್ಟಾಚಾರ ನಿಗ್ರಹ ದಳ ಮೊಕದ್ದಮೆ ದಾಖಲಿಸಿದೆ. ಅಗತ್ಯವಾದರೆ ಸಿಓಡಿ ತನಿಖೆಗೆ ಒಪ್ಪಿಸಲು ಚಿಂತಿಸುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಲಾಗುವದೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿª ಎಂ.ಆರ್. ಸೀತಾರಾಂ ಹೇಳಿದ್ದಾರೆ.

ವಿಧಾನ ಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬೀಲಿರ ಹರೀಶ್ ಅಪ್ಪಯ್ಯ ಅವರ ನೇತೃತ್ವದಲ್ಲಿ ಬೆಳೆಗಾರರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು. ವಿಯೆಟ್ನಾಂ ಹಾಗೂ ಹೊರ ದೇಶದಿಂದ ಕರಿಮೆಣಸು ಆಮದು ನಿರ್ಭಂದಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ದೇಶಿಯ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಕೂಡಲೇ ಕೇಂದ್ರ ಆಮದು ನಿರ್ಭಂದಿಸಬೇಕು ಎಂದು ಸಚಿವ ಸೀತಾರಾಂ ಹೇಳಿದರು.

ನಿಯೋಗದಲ್ಲಿ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಹಾಗೂ ಮುಖಂಡರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಹಾಜರಿದ್ದರು.