ಮಡಿಕೇರಿ, ಸೆ. 22: ಕಲಾವಿದರೂ ಅಂದ ಮೇಲೆ, ಕಲೆ - ಸಂಸ್ಕøತಿಯನ್ನು ಪೋಷಿಸುವವರು, ಉಳಿಸಿ, ಬೆಳೆಸುವವರು. ಅಂತಹ ಕಲಾವಿದರಿಗೆ ಪ್ರೋತ್ಸಾಹ, ಉತ್ತೇಜನ ನೀಡುವದು ಸಮಾಜದ ಪ್ರತಿಯೋರ್ವ ಪ್ರಜೆಯ ಕರ್ತವ್ಯವೂ ಹೌದು.ಆದರೆ.., ಮಡಿಕೇರಿ ದಸರಾ ಸಮಿತಿ ಕಲಾವಿದರನ್ನು ಪ್ರೋತ್ಸಾಹಿಸುವ ಬದಲಿಗೆ ಅವಮಾನ ಮಾಡಿ ಅನ್ಯಾಯ ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಸರಕಾರದಿಂದ ಅನುದಾನ ಕಡಿಮೆ ಬಂದಿದೆ ಎಂಬ ಕುಂಟು ನೆಪ ಒಡ್ಡಿ ಸ್ಥಳೀಯ, ಕೊಡಗಿನ ಕಲಾವಿದರಿಗೆ ಸಂಭಾವನೆ ನೀಡದಂತೆ ತೀರ್ಮಾನ ಕೈಗೊಂಡಿದೆ. ಕಲೆ, ಸಂಸ್ಕøತಿ, ಸಾಹಿತ್ಯದಲ್ಲಿ ಶ್ರೀಮಂತ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಕೊಡಗು ಜಿಲ್ಲೆಗೆ ದಸರಾ ಸಮಿತಿಯ ಈ ನಡೆ ಕಪ್ಪು ಚುಕ್ಕೆಯಿಟ್ಟಂತಾಗಿದೆ.
ಮಡಿಕೇರಿ ದಸರಾ ಉತ್ಸವಕ್ಕೆ ಕಳೆದ ವರ್ಷ ಸರಕಾರದಿಂದ ರೂ. 60 ಲಕ್ಷ ಅನುದಾನ ಬಿಡುಗಡೆ ಗೊಂಡಿತ್ತು. ಈ ಬಾರಿ ದಸರಾ ಸಮಿತಿ ರೂ. 1 ಕೋಟಿ ಅನುದಾನದ ಬೇಡಿಕೆ ಇಟ್ಟಿತ್ತು. ಆದರೆ ಸಮಿತಿಯಲ್ಲಿನ ಗೊಂದಲದಿಂದಾಗಿ ವಾಸ್ತವ ಅರಿಯದ ಮುಖ್ಯಮಂತ್ರಿಗಳು ಮೊದಲಿಗೆ ಕೇವಲ ರೂ. 30 ಲಕ್ಷ ಮಂಜೂರು ಮಾಡಿದರು. ನಂತರದಲ್ಲಿ ಜನಪ್ರತಿನಿಧಿಗಳು ಮತ್ತೊಮ್ಮೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರೂ. 50 ಲಕ್ಷ ಮಂಜೂರು ಮಾಡಿದರು. ಆದರೆ, ದಸರಾ ಸಮಿತಿಯವರು ರೂ. 94 ಲಕ್ಷ ಮೊತ್ತದ ಬಜೆಟ್‍ನೊಂದಿಗೆ ದಸರಾ ಆಚರಣೆಗೆ ಮುಂದಾಗಿದ್ದು, ಇದೀಗ ಅನುದಾನ ಕಡಿಮೆ ಇರುವದರಿಂದ ಕಲಾವಿದರಿಗೆ ನೀಡಲಾಗುವ ಸಂಭಾವನೆಯನ್ನು ಕಡಿತಗೊಳಿಸಿ ಇನ್ನಿತರ ವೆಚ್ಚಗಳಿಗೆ ಆ ಹಣವನ್ನು ಸರಿದೂಗಿಸುವ ಪ್ರಯತ್ನದಲ್ಲಿದೆ.
ಕಲಾವಿದರಿಗೆ ಅನುದಾನ
ಸರಕಾರದ ಅನುದಾನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಬಿಡುಗಡೆಯಾಗುತ್ತದೆ. ಇಲಾಖೆಯ ನಿಯಮಾನುಸಾರ
(ಮೊದಲ ಪುಟದಿಂದ) ಬಿಡುಗಡೆ ಯಾಗುವ ಅನುದಾನದಲ್ಲಿ ಶೇ. 60 ರಷ್ಟನ್ನು ಕಲಾವಿದರಿಗೆ ಮೀಸಲಿಡಬೇಕು. ಇನ್ನುಳಿದ ಹಣದಲ್ಲಿ ಕಾರ್ಯಕ್ರಮ ಆಯೋಜನೆಗೆ ಬಳಸಿಕೊಳ್ಳಬಹು ದಾಗಿದೆ. ಆದರೆ ಇಲ್ಲಿ ದಸರಾ ಸಮಿತಿ ವೇದಿಕೆ ನಿರ್ಮಾಣಕ್ಕೆ ರೂ. 30 ಲಕ್ಷ ವ್ಯಯಿಸುತ್ತಿದೆ. ಇನ್ನುಳಿದ ಹಣದಲ್ಲಿ ಮಂಟಪಗಳಿಗೆ, ವಿವಿಧ ಉಪ ಸಮಿತಿಗಳ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿದೆ. ಪರ ಊರುಗಳಿಂದ ಬರುವ ಕಲಾವಿದರಿಗೆ 50 ಸಾವಿರದಿಂದ 2 ಲಕ್ಷದವರೆಗೆ ಸಂಭಾವನೆ ನೀಡಲಾಗುತ್ತಿದೆ. ಆದರೆ ಸ್ಥಳೀಯ ಕಲಾವಿದರಿಗೆ ಚಿಕ್ಕಾಸು ನೀಡಬಾರದೆಂಬ ಹೊಸ ನಿಯಮ ಜಾರಿ ಮಾಡಿದೆ.
ಈ ಹಿಂದೆ ಸರಕಾರದ ಯಾವದೇ ಅನುದಾನ ಇಲ್ಲದಿದ್ದ ಸಂದರ್ಭದಲ್ಲಿ ಕೂಡ ಸಾಂಸ್ಕøತಿಕ ಕಾರ್ಯಕ್ರಮಗಳು, ದಶಮಂಟಪಗಳು ಶೋಭಿಸುತ್ತಿದ್ದವು. ಮಂಟಪಗಳು ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ಪ್ರದರ್ಶನ ಮಾಡುತ್ತಿದ್ದವು. ದಸರಾ ಸಮಿತಿಯಿಂದ ಸಂಗ್ರಹವಾಗುವ ಹಣದಲ್ಲಿ ಕಲಾವಿದರಿಗೆ ಸಂಭಾವನೆ ನೀಡಲಾಗುತ್ತಿತ್ತು. ಆದರೆ ಇದೀಗ ಇದೇ ಪ್ರಥಮ ಬಾರಿಗೆ ಕಲಾವಿದರಿಗೆ ಅನ್ಯಾಯವೆಸಗುವ, ಅವಮಾನ ಮಾಡುವ ತೀರ್ಮಾನವನ್ನು ದಸರಾ ಸಮಿತಿ ಕೈಗೊಂಡಿರುವದು ಕಲಾವಿದರು ಹಾಗೂ ಕಲಾಸಕ್ತರ ನೋವಿನ ನುಡಿಯಾಗಿದೆ.
ವಿಭಜನೆ ಏಕೆ..?
ಕಲಾವಿದರು ಅಂದ ಮೇಲೆ ಎಲ್ಲರೂ ಕಲಾವಿದರೆ, ಅದರಲ್ಲಿ ಸ್ಥಳೀಯರು, ಹೊರಗಿನವರು ಎಂಬ ವಿಭಜನೆ ಏಕೆ ಎಂಬದೇ ಕಲಾವಿದರ ಪ್ರಶ್ನೆ. ಇಲ್ಲಿನ ಕಲಾವಿದರು ಕೂಡ ಕಾರ್ಯಕ್ರಮ ನೀಡಲು ಪೂರ್ವ ತಯಾರಿ, ವೇಷ - ಭೂಷಣಗಳಿಗೆ, ಕಲಾವಿದರನ್ನು ಕರೆದೊಯ್ಯಲು ವಾಹನ, ಊಟೋಪಚಾರಕ್ಕೆ 10 ರಿಂದ 50 ಸಾವಿರದವರೆಗೂ ವೆಚ್ಚ ಮಾಡುತ್ತಾರೆ. ದಸರಾ ಸಾಂಸ್ಕøತಿಕ ಸಮಿತಿಯಿಂದ ಮೂಗಿಗೆ ತುಪ್ಪ ಸವರುವ ಹಾಗೆ 2 ರಿಂದ 5 ಸಾವಿರದವರೆಗೆ ಮಾತ್ರ ಅಲ್ಪ ಸಂಭಾವನೆ ನೀಡುತ್ತದೆ. ಆದರೆ, ಅದೇ ಆತ್ಮತೃಪ್ತಿ ಎಂಬಂತೆ ತಮ್ಮ ಕಲೆ ಪ್ರದರ್ಶಿಸಿ ಕಲಾವಿದರು ಸಂತೃಪ್ತರಾಗುತ್ತಾರೆ. ಇದೀಗ ಆ ಅಲ್ಪ ಕಾಣಿಕೆಗೂ ಕತ್ತರಿ ಹಾಕಿದರೆ, ಕಲಾವಿದರಿಗೆ ಆಸಕ್ತಿಯಾದರೂ ಎಲ್ಲಿಂದ ಬರಬೇಕೆಂದು ಕಲಾಸಕ್ತರ ಪ್ರಶ್ನೆ..? ಅಷ್ಟಕ್ಕೂ ಮಡಿಕೇರಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳು ಯಶಸ್ಸಾಗುವದು ಸ್ಥಳೀಯ ಕಲಾವಿದರಿಂದಲೇ. ಸ್ಥಳೀಯ ಕಲಾವಿದರಿಂದಾಗಿಯೇ ಪ್ರೇಕ್ಷಕರು ಕೂಡ ಬರುವದು. ಕಲಾವಿದರಿಗೇ ಅನ್ಯಾಯವಾದರೆ ಪ್ರೇಕ್ಷಕರಾದರೂ ಬರುತ್ತಾರೆಯೇ, ಕಾರ್ಯಕ್ರಮ ಯಶಸ್ಸಾಗುತ್ತದೆಯೋ ಎಂಬದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರೇಕ್ಷಕರ ಪ್ರಶ್ನೆ. ಸ್ಥಳೀಯ ಕಲಾವಿದರನ್ನು ನಗಣ್ಯದಂತೆ ಕಾಣುವದು ತರವಲ್ಲ, ಸಂಭಾವನೆ ಇಲ್ಲವೆಂದು ಕಲಾವಿದರಾರು ಕಾರ್ಯಕ್ರಮಕ್ಕೆ ಬಾರದಿದ್ದರೆ ಲಕ್ಷಗಟ್ಟಲೆ ವ್ಯಯಿಸಿ ಅಷ್ಟೊಂದು ದೊಡ್ಡ ವೇದಿಕೆ ನಿರ್ಮಿಸಿದಕ್ಕೆ ಫಲವಾದರೂ ಏನು ಎಂದು ಪ್ರೇಕ್ಷಕರೇ, ಕೇಳುವಂತಾಗಿದೆ. ದಸರಾ ಸಮಿತಿಯವರ ಪ್ರಕಾರ ಮಂಟಪಗಳಿಗೆ ಹಣ ಕೊಡಬೇಕು, ಹಾಗಾಗಿ ಕಲಾವಿದರಿಗೆ ನೀಡಲಾಗದು, ಸ್ಥಳೀಯ ಕಲಾವಿದರು ಅವರಾಗಿಯೇ ಬಂದು ಕಾರ್ಯಕ್ರಮ ಕೊಟ್ಟು ಹೋಗುತ್ತಾರೆ ಎಂಬ ತೀರಾ ಬಾಲಿಶ ನುಡಿಗಳು, ‘ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು’ ಎಂಬ ನಾಣ್ಣುಡಿ ಸಾರ್ವಕಾಲಿಕ, ಇಲ್ಲಿಯೂ ಹಾಗೇ ಹಾಗಿದೆ. ಅನುದಾನಕ್ಕೆ ಅನುಗುಣವಾಗಿ ಕಾರ್ಯಕ್ರಮ ಯೋಜನೆ ರೂಪಿಸಿಕೊಂಡಿದ್ದರೆ ಈ ರೀತಿಯ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಒಂಭತ್ತು ದಿನಗಳ ಪ್ರಮುಖ ಆಕರ್ಷಣೆಯಾಗಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ಅಂದಾಜು ವೆಚ್ಚ ಹಾಗೂ ದಸರಾ ಸಮಿತಿಯ ಅನುದಾನದ ಬಗ್ಗೆ ಉಭಯ ಸಮಿತಿಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಕಲಾವಿದರು ಕಳಾಹೀನರಾಗು ವಂತಾಗಿದೆ! ಪರ ಊರಿನ ಕಲಾವಿದರಿಗೆ ಲಕ್ಷಗಟ್ಟಲೆ ಹಣ ನೀಡುವ ಬದಲಿಗೆ ಅದೇ ಹಣದಲ್ಲಿ ಸ್ಥಳೀಯ ಕಲಾವಿದರುಗಳಿಗೆ ಹಂಚಿಕೆ ಮಾಡಿದರೆ ಸ್ಥಳೀಯರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಸ್ಥಳೀಯರಿಗೆ ಇಲ್ಲಿಯೇ ಪ್ರೋತ್ಸಾಹ ಇಲ್ಲವಾದರೆ ಇನ್ನೆಲ್ಲಿಗೆ ಹೋಗುವದು ಎಂಬದು ಸ್ಥಳೀಯ ಕಲಾವಿದರ ನೋವಿನ ನುಡಿ.
ಕಾರ್ಯಕ್ರಮದಲ್ಲಿ ಕಲಾವಿದರಿಗೆ ಗೌರವ ನೀಡಬೇಕೇ ಹೊರತು ಅವಮಾನಿಸಬಾರದು. ಈಗಾಗಲೇ ಸಾಂಸ್ಕøತಿಕ ಸಮಿತಿಯಿಂದ ಆಯ್ಕೆಯಾದ ಕಲಾವಿದವರಿಗೆ ಇಂತಿಷ್ಟು ಸಂಭಾವನೆ ಎಂದು ಘೋಷಿಸಿ, ಮಾಹಿತಿ ಕೂಡ ನೀಡಲಾಗಿದೆ. ಆದರೆ ಇದೀಗ ದಿಢೀರಾಗಿ ಸಂಭಾವನೆ ಇಲ್ಲವೆಂದು ಹೇಳುವದು ಎಷ್ಟು ಸರಿ ಎಂಬದು ಕಲಾವಿದರ ಪ್ರಶ್ನೆ..!