ಕುಶಾಲನಗರ, ಸೆ. 22: ಜೀವನದಿ ಕಾವೇರಿಗೆ ಕುಶಾಲನಗರದಲ್ಲಿ 70ನೇ ಮಹಾ ಆರತಿ ಕಾರ್ಯಕ್ರಮ ನಡೆಯಿತು. ಕಾವೇರಿ ಮಹಾಪುಷ್ಕರ ಮಹೋತ್ಸವ ಪರ್ವಕಾಲದಲ್ಲಿ ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ನದಿ ತಟದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಆಶ್ರಯದಲ್ಲಿ ನಡೆದ ಆರತಿ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ನದಿಗೆ ಬಾಗಿನ ಅರ್ಪಿಸುವದರೊಂದಿಗೆ ಮಹಾ ಆರತಿ ಬೆಳಗಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಆಂದೋಲನದ ಸಂಸ್ಥಾಪಕರು ಹಾಗೂ ಗಂಜಾಂ ಶ್ರೀ ಶಂಕರಪರಮಾನಂದ ಟ್ರಸ್ಟ್‍ನ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ ಮಾತನಾಡಿ, 12 ವರ್ಷಗಳಿಗೊಮ್ಮೆ ಬರುವ ಕಾವೇರಿ ಮಹಾಪುಷ್ಕರ ಮೂಲ ಕಾವೇರಿಯಿಂದ ಸಮುದ್ರ ಸಂಗಮ ತನಕ ವಿವಿಧೆಡೆ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಈ ಸಂದರ್ಭ ಲಕ್ಷಾಂತರ ಭಕ್ತಾದಿಗಳು ಪವಿತ್ರ ನದಿಯಲ್ಲಿ ಸ್ನಾನಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ರಾಜ್ಯ ಸರಕಾರ ಇಂತಹ ಪುಣ್ಯ ಕಾರ್ಯಕ್ರಮಗಳ ಬಗ್ಗೆ ನಿರ್ಲಕ್ಷ್ಯ ತಾಳಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಕಳೆದ 6 ವರ್ಷಗಳಿಂದ ನಿರಂತರವಾಗಿ ಕುಶಾಲನಗರದಲ್ಲಿ ಪ್ರತಿ ಹುಣ್ಣಿಮೆಯ ಸಂದರ್ಭ ಕಾವೇರಿ ನದಿಗೆ ಮಹಾ ಆರತಿ ಬೆಳಗುವ ಮೂಲಕ ನದಿ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸುತ್ತಿರುವ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾವೇರಿ ಮಹಾ ಪುಷ್ಕರದ ಮಹತ್ವದ ಬಗ್ಗೆ ಮಾಹಿತಿ ನೀಡಿದ ಶಕ್ತಿ ದಿನಪತ್ರಿಕೆಯ ಸಹಾಯಕ ಸಂಪಾದಕ ಚಿ.ನಾ.ಸೋಮೇಶ್, ನದಿ ತಟಗಳು ನಮ್ಮ ದೇಶದ ಸಂಸ್ಕøತಿಯನ್ನು ಸೃಷ್ಟಿಸಿದ ಸ್ಥಳವಾಗಿದ್ದು ಅದರ ಆರಾಧನೆಯೊಂದಿಗೆ ಜಾಗೃತಿ ಮೂಡಿಸುವದು ಅಗತ್ಯವಾಗಿದೆ. ಪ್ರತಿಯೊಬ್ಬರೂ ಇಂತಹ ಬೃಹತ್ ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತು ಕೈಜೋಡಿಸಬೇಕು.

ಉತ್ತಮ ಕಾರ್ಯಗಳು ನಡೆಯುವ ಸಂದರ್ಭ ಕುಹಕದ ಮಾತುಗಳಿಗೆ ಕಿವಿಗೊಡದೆ ನಿರ್ದಿಷ್ಟ ಗುರಿಯೊಂದಿಗೆ ನದಿ ಸಂರಕ್ಷಣೆಯ ಕಾರ್ಯ ಸಾಗಬೇಕಾಗಿದೆ ಎಂದರು.

ಈ ಸಂದರ್ಭ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್‍ನ ಅಧ್ಯಕ್ಷ ಗಣಪತಿ, ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಪ್ರಮುಖ ರಾಮದಾಸ್, ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅವರುಗಳು ಸ್ವಚ್ಚತಾ ಆಂದೋಲನ ಸಮಿತಿ ಚಟುವಟಿಕೆಗಳನ್ನು ಶ್ಲಾಘಿಸುವದರೊಂದಿಗೆ, ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ ಎಂದರು. ಕುಶಾಲನಗರದ ವಿವಿಧ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ನದಿಗೆ ಬಾಗಿನ ಅರ್ಪಿಸುವದರೊಂದಿಗೆ ಆರತಿ ಬೆಳಗಲಾಯಿತು. ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು.

ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಚೌಡೇಶ್ವರಿ ದೇವಾಲಯ ಅಧ್ಯಕ್ಷ ಡಿ.ಟಿ.ವಿಜಯೇಂದ್ರ, ವಿ.ಡಿ. ಪುಂಡರೀಕಾಕ್ಷ, ಅಯ್ಯಪ್ಪಸ್ವಾಮಿ ದೇವಾಲಯ ಸೇವಾ ಟ್ರಸ್ಟ್‍ನ ನಿರ್ದೇಶಕ ಪಿ.ಪಿ.ಸತ್ಯನಾರಾಯಣ, ಬ್ರಾಹ್ಮಣ ಸಮಾಜದ ಅಧ್ಯಕ್ಷ ವಿಜಯೇಂದ್ರ, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ತಾಲೂಕು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಸಮಿತಿಯ ಪ್ರಮುಖರಾದ ಡಿ.ಆರ್.ಸೋಮಶೇಖರ್, ವನಿತಾ ಚಂದ್ರಮೋಹನ್, ನಿಡ್ಯಮಲೆ ದಿನೇಶ್ ಮತ್ತಿತರರು ಇದ್ದರು.