ಮಡಿಕೇರಿ, ಸೆ. 22: ಪತ್ರಿಕೆಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆಪ್ತ ಸಲಹೆಗಾರರಾಗಬಹುದೇ ವಿನಾ ಚಿಕಿತ್ಸೆ ನೀಡುವ ವೈದ್ಯರಾಗಲು ಸಾಧ್ಯವಿಲ್ಲ ಎಂದು ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಅಭಿಪ್ರಾಯಪಟ್ಟರು.
ಕೊಡಗು ಪ್ರೆಸ್ ಕ್ಲಬ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಎಫ್ಎಂಸಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಆಯೋಜಿಸಿದ್ದ ಸರಣಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸ್ಥಳೀಯ ಪತ್ರಿಕೆಗಳ ಪ್ರಾಮುಖ್ಯತೆ ಮತ್ತು ಸವಾಲುಗಳು ವಿಷಯದ ಕುರಿತು ವಿಷಯ ಮಂಡಿಸಿದರು. ಉತ್ತಮ ಸಮಾಜ ನಿರ್ಮಾಣಕ್ಕೆ ಮಾಧ್ಯಮಗಳು ಪೂರಕ ಸಲಹೆ ನೀಡಬಹುದು. ಅದನ್ನು ಸ್ವೀಕರಿಸುವದು ಅಥವಾ ಬಿಡುವದು ಸಮಾಜಕ್ಕೆ ಬಿಟ್ಟ ವಿಷಯವೆಂದರು.
ಅನುಭವಿಯ ಅನುಭವವನ್ನು ಜಿಗಣೆಯಂತೆ ಹೀರಿಕೊಳ್ಳಬೇಕು, ಬಯಸಿ ಮಾಡುವ ಕೆಲಸದಲ್ಲಿ ಬಳಲಿಕೆ ಇರುವದಿಲ್ಲ. ಬಯಸದೇ ಬರುವ ಕೆಲಸವನ್ನೂ ಪ್ರೀತಿಯಿಂದ ಸ್ವೀಕರಿಸಿ ದಲ್ಲಿ ತೃಪ್ತಿ ಸಿಗುತ್ತದೆ, ಪರಿಪೂರ್ಣತೆ ಯಿಂದ ಕೆಲಸ ಮಾಡಿದರೆ ಫಲ ಸಿಗುತ್ತದೆ. ನಿಷ್ಠೆಯಿಂದ ಮಾಡುವ ಕೆಲಸಕ್ಕೆ ಮನ್ನಣೆ ದೊರೆಯುತ್ತದೆ, ತಮ್ಮ ಬರಹಕ್ಕೆ ಸ್ಪಂದನೆ ಸಿಗುವಾಗ, ಪರಿಣಾಮ ಬೀರುವಾಗ ತೃಪ್ತಿ ಆಗುತ್ತದೆ ಎಂದು ಪತ್ರಿಕೋದ್ಯಮವನ್ನು ವಿಶ್ಲೇಷಿಸಿದರು.
ಸಮಾಜದಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಅಭಿಪ್ರಾಯ ಮೂಡಿಸುವ ಪ್ರಕ್ರಿಯೆ ಸ್ಥಳೀಯ ಪತ್ರಿಕೆಗಳು ಮಾಡುತ್ತವೆ, ಸಣ್ಣ ಪತ್ರಿಕೆ ಹೊರತರುವದು ದೊಡ್ಡ ಪತ್ರಿಕೆಗಿಂತ ಕಷ್ಟದ ಕೆಲಸ. ಸ್ಥಳೀಯ ಪತ್ರಿಕೆ ಮಾಡುವವರಿಗೆ ಪ್ರತಿಯೊಬ್ಬರ ಪರಿಚಯ ಇರುತ್ತದೆ. ಇದರಿಂದ ಒತ್ತಡ ಹೆಚ್ಚಿರುತ್ತದೆ. ಕೊಡಗಿನಲ್ಲಿ ಹಲವು ಸಂಘಟನೆಗಳ ಬೆಳವಣಿಗೆಗೆ ಪತ್ರಿಕೆಗಳೂ ಕಾರಣವೆಂದರು.
ನೈಜ ಪತ್ರಿಕೋದ್ಯಮಿಗಳು ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ. ನೈಜ ಪತ್ರಕರ್ತರಿಗೆ ಸ್ನೇಹಿತರೇ ಇರುವದಿಲ್ಲ. ಒಂದು ಪತ್ರಿಕೆಯನ್ನು ಇಂತಹವರ ಪರ ಅಥವಾ ವಿರುದ್ಧವಾಗಿದೆ ಎಂದು ಗುರುತಿಸಲು ಸಾಧ್ಯವಾಗದಿದ್ದಲ್ಲಿ ಆ ಪತ್ರಿಕೆ ಪತ್ರಿಕೋದ್ಯಮದ ನಿಗೂಢತೆ ಉಳಿಸಿಕೊಂಡಿರುವದಕ್ಕೆ ಸಾಕ್ಷಿ ಎಂದರು.ಸಮಾಜದಲ್ಲಿ ತಪ್ಪು ತಿದ್ದಿಕೊಳ್ಳುವ ಸಹಜತೆ ಇಲ್ಲ, ಸ್ವೀಕಾರ ಮನೋಭಾವ ಮತ್ತು ಮನಸ್ಥಿತಿ ಕಡಿಮೆ ಆಗುತ್ತಿರುವದರಿಂದ ವರದಿಗಾರಿಕೆ ಕಷ್ಟಕರವಾಗುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿ ಯುವ ಪತ್ರಕರ್ತರ ಸಮೂಹ ಹೆಚ್ಚಾಗಿದೆ. ಅವರಲ್ಲಿ ಕೆಲಸ ಮಾಡುವ ಸಾಮಥ್ರ್ಯ, ಕುತೂಹಲ, ವೇಗ, ಉತ್ಸಾಹ ಎಲ್ಲವೂ ಇರುತ್ತದೆ. ಅನುಭವದ ಕೊರತೆಯಿಂದ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಬೇಕಾದ ಅನುಭವದ ಕೊರತೆ ಇರುತ್ತದೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಸುದ್ದಿ, ಲೇಖನ ಬರೆಯವದನ್ನು ರೂಢಿಸಿಕೊಳ್ಳಬೇಕು. ಮನಸ್ಸು ಮಾಡಿದರೆ ಪ್ರತಿಯೊಂದು ವಿಷಯದ ಕುರಿತು ಬರೆಯಬಹುದಾಗಿದೆ. ಆದರೆ, ನಮ್ಮಲ್ಲಿ ಬರೆಯುವ ಆಸಕ್ತಿ ಇರಬೇಕೆಂದು ಚಿದ್ವಿಲಾಸ್ ಹೇಳಿದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಂಜುನಾಥ್, ಜಂಟಿ ಕಾರ್ಯದರ್ಶಿ ವಿಘ್ನೇಶ್ ಭೂತನಕಾಡು, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಇಳೆಯರಾಜ, ಮೋನಿಕಾ ಇದ್ದರು.