ಸೋಮವಾರಪೇಟೆ, ಸೆ.22 : ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ಯೋಜನಾ ನಿರ್ದೇಶಕರು ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎ. ಆದಂ ಮಾಡಿರುವ ಆರೋಪ ನಿರಾಧಾರ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪ.ಪಂ. ಸಭಾಂಗಣದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯ ಆದಂ ಏಕಾಏಕಿ ಜಿಲ್ಲಾ ಯೋಜನಾ ನಿರ್ದೇಶಕರ ವಿರುದ್ಧ ಆರೋಪ ಮಾಡಿರುವದು ಸಮಂಜಸವಲ್ಲ. ಪ.ಪಂ.ಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಸಂಬಂಧಿಸಿದ ಅಧಿಕಾರಿಗಳೇ ಯೋಜನಾಧಿಕಾರಿಗಳಿಗೆ ತಲುಪಿಸುತ್ತಾರೆ. ಇವರು ಯಾರೂ ಸಹ ಇದುವರೆಗೂ ಇಂತಹ ಆರೋಪ ಮಾಡಿಲ್ಲ. ಆದರೆ ದುರಾಲೋಚನೆ ಯಿಂದ ಆದಂ ಯೋಜನಾ ನಿರ್ದೇಶಕರ ವಿರುದ್ಧ ಆಧಾರ ರಹಿತ ಆರೋಪ ಮಾಡಿರುವದು ಖಂಡನೀಯ ಎಂದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಯೋಜನಾ ನಿರ್ದೇಶಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ದುದ್ದುಗಲ್ ಚೆಕ್ ಡ್ಯಾಂ, ಜನರೇಟರ್, ಪಂಪ್ಸೆಟ್ ಖರೀದಿ, 2 ಕೋಟಿ ವೆಚ್ಚದ ಪ.ಪಂ. ಕಚೇರಿ ಸಂಕೀರ್ಣ ಕಾಮಗಾರಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಆಗಾಗ್ಗೆ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮುಖ್ಯಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನೂ ನೀಡುತ್ತಿದ್ದಾರೆ ಎಂದು ವಿಜಯಲಕ್ಷ್ಮೀ ಸಮರ್ಥಿಸಿ ಕೊಂಡರು.
ಆರೋಪ ಮಾಡಿರುವ ಆದಂ ಅವರು, ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದ ವಿಜಯಲಕ್ಷ್ಮೀ ಸುರೇಶ್, ಸುಳ್ಳು ಆರೋಪಗಳ ಮೂಲಕ ಪಂಚಾಯಿತಿ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಕಾರ್ಯಕ್ಕೆ ಆದಂ ಮುಂದಾಗಿರುವದು ಸರಿಯಲ್ಲ ಎಂದರು.
ಸದಸ್ಯ ಆದಂ ಅವರಿಂದಾಗಿ ಪಂಚಾಯಿತಿಯಲ್ಲಿ ಮಹಿಳಾ ಸಿಬ್ಬಂದಿಗಳು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷುಲ್ಲಕ ಕಾರಣಗಳಿಗೆ ಮಹಿಳಾ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಸ್ವತಃ ಅಧ್ಯಕ್ಷರೇ ತಮ್ಮ ಮೇಲಿನ ದೌರ್ಜನ್ಯಕ್ಕಾಗಿ ಪೊಲೀಸ್ ದೂರು ನೀಡಿದ್ದಾರೆ. ಮೊಕದ್ದಮೆಯ ವಿಚಾರಣೆಯೂ ನಡೆಯುತ್ತಿದೆ. ಇಷ್ಟಾಗಿಯೂ ಆದಂ ಅವರು ತಮ್ಮ ವರ್ತನೆಯನ್ನು ಬದಲಿಸಿಕೊಂಡಿಲ್ಲ ಎಂದು ಆರೋಪಿಸಿದ ವಿಜಯಲಕ್ಷ್ಮೀ ಇವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂದು ಹೇಳಿಕೊಂಡು ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೆದರಿಸಲಾಗುತ್ತಿದೆ. ಇವರ ವಿರುದ್ಧ ಅನೇಕರು ಮೌಖಿಕ ದೂರು ನೀಡಿದ್ದು, ಈ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಲಾಗುವದು ಎಂದು ತಿಳಿಸಿದರು.
ಗೊಷ್ಠಿಯಲ್ಲಿ ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ ಸುಧಾಕರ್, ಸದಸ್ಯೆ ಸುಶೀಲಾ, ಹಿರಿಯ ಸದಸ್ಯ ಬಿ.ಎಂ. ಸುರೇಶ್, ಈಶ್ವರ್ ಉಪಸ್ಥಿತರಿದ್ದರು.