ಗೋಣಿಕೊಪ್ಪಲು, ಸೆ. 22: ಸೂಕ್ಷ್ಮ ಪರಿಸರ ವಲಯವನ್ನು ಗ್ರಾಮ ಮಟ್ಟದಿಂದ ಕೈಬಿಡುವಂತೆ ಒತ್ತಾಯಿಸಿ ತಾ. 26 ರಂದು ಕುಟ್ಟದಿಂದ ಮತ್ತಿಗೋಡುವರೆಗೆ ವಾಹನ ಜಾಥಾ ನಡೆಸುವ ಮೂಲಕ ಯೋಜನೆಯನ್ನು ವಿರೋಧಿಸಲು ನಿರ್ಧರಿಸಲಾಯಿತು.
ಯೋಜನೆಯನ್ನು ಅರಣ್ಯದಂಚಿನ ಶೂನ್ಯ ಕಿ.ಮೀ. ದೂರ ಎಂದು ಸೂಕ್ಷ್ಮ ಪರಿಸರ ವಲಯ ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಪಂಚಾಯಿತಿ ಅಧ್ಯಕ್ಷೆ ಕಡೇಮಾಡ ಅನಿತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯದಂತೆ ನಿರ್ಣಯ ಕೈಗೊಳ್ಳಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಬಾಳೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಇಂತಹ ಯೋಜನೆ ಬೆಳೆಗಾರರನ್ನು ತುಂಬಾ ಸಂಕಷ್ಟಕ್ಕೆ ಸಿಲುಕಿಸಲಿದೆ. ಇದರಿಂದಾಗಿ ಯೋಜನೆಯನ್ನು ಸಂಪೂರ್ಣವಾಗಿ ವಿರೋಧಿಸಬೇಕು ಎಂದರು.
ಬಾಳೆಲೆ ಎಂಪಿಎಂಎಸ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಯೋಜನೆಯನ್ನು ವಿರೋಧಿಸುವಂತೆ ಕರೆ ನೀಡಿದರು. ಜಿ.ಪಂ. ಸದಸ್ಯ ಬಾನಂಡ ಪ್ರತ್ಯು ಮಾತನಾಡಿ, ಯೋಜನೆ ಜಾರಿಯಾದರೆ ಐಎಎಸ್ ಅಧಿಕಾರಿಗಳು ಹಾಗೂ ಶಾಸಕರುಗಳನ್ನು ಒಳಗೊಂಡ ಮಾಸ್ಟರ್ ಕಮಿಟಿಯ ಅಪ್ಪಣೆಯಿದ್ದರೆ ಮಾತ್ರ ತೋಟ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದು ಬಾಧಕ ಎಂದರು.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಪಾರುವಂಗಡ ಪವನ್, ಮಾಜಿ ಅಧ್ಯಕ್ಷ ಮೇಚಂಡ ವಾಸು, ಆರ್ಎಂಸಿ ಸದಸ್ಯ ಸುಜಾ ಪೂಣಚ್ಚ, ಬಿಜೆಪಿ ಮಹಿಳಾ ಘಟಕ ಅಧ್ಯಕ್ಷೆ ಯಮುನಾ ಚೆಂಗಪ್ಪ ಉಪಸ್ಥಿತರಿದ್ದರು. ಪಂಚಾಯಿತಿಯ ಎದುರು ಯೋಜನೆ ವಿರುದ್ಧ ಘೋಷಣೆ ಕೂಗಿ ವಿರೋಧಿಸಲಾಯಿತು.