ಸಿದ್ದಾಪುರ, ಸೆ. 22: ಹುಲಿಯನ್ನು ಸೆರೆಹಿಡಿಯಲು ಬೋನು ಇರಿಸಿ ಹತ್ತು ದಿನಗಳು ಕಳೆದರೂ ಹುಲಿ ಸೆರೆ ಸಿಕ್ಕದಿರುವ ಹಿನೆÀ್ನಲೆಯಲ್ಲಿ ಗ್ರಾಮಾಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ.

ಮಾಲ್ದಾರೆ ಸಮೀಪದ ಮೈಲಾದ್‍ಪುರದ ಬಿ.ಬಿ.ಟಿ.ಸಿ. ಕಂಪೆನಿಗೆ ಸೇರಿದ ಕಾಫಿ ತೋಟವೊಂದರಲ್ಲಿ ಕಳೆದ 1 ತಿಂಗಳ ಹಿಂದೆ ಜಾನುವಾರುಗಳ ಮೇಲೆ ಹುಲಿ ಧಾಳಿ ನಡೆಸಿದ ಪರಿಣಾಮ ಜಾನುವಾರುಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಹುಲಿಯ ಚಲನವಲನವನ್ನು ಕಂಡು ಹಿಡಿಯಲು 5 ಸಿ.ಸಿ. ಕ್ಯಾಮೆರಾಗಳನ್ನು ಅರಣ್ಯ ಇಲಾಖೆ ಕಾಫಿ ತೋಟದೊಳಗೆ ಅಳವಡಿಸಲಾಗಿತ್ತು. ಇದಾದ ಬಳಿಕ ಕ್ಯಾಮೆರಾಗಳಲ್ಲಿ ಹುಲಿಯ ಚಲನ ವಲನ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಚರ್ಚಿಸಿ ಹುಲಿಯನ್ನು ಸೆರೆಹಿಡಿಯಲು ಕಾಫಿ ತೋಟದೊಳಗೆ ಆಡೊಂದನ್ನು ಬೋನಿನಲ್ಲಿ ಕಟ್ಟಿ ಹಾಕಿ ಬೋನ್ ಇರಿಸಲಾಗಿತ್ತು. ಅಲ್ಲದೇ ಬೋನನ್ನು ಸೊಪ್ಪುಗಳಿಂದ ಮುಚ್ಚಿ ವ್ಯವಸ್ಥಿತ ರೂಪದಲ್ಲಿ ಇಡಲಾಗಿತ್ತು. ಆದರೆ ದಿನಂಪ್ರತಿ ಆರ್.ಆರ್.ಟಿ. ತಂಡ ಹುಲಿಯ ಚಲನವಲನ ವೀಕ್ಷಿಸುತ್ತಿದ್ದು, ಹುಲಿಯು ಬೋನಿನ ಒಳಗೆ ಪ್ರವೇಶ ಮಾಡಿಲ್ಲ. ಇದೀಗ ಹುಲಿಯು ಅರಣ್ಯದೊಳಗೆ ಸುತ್ತಾಡುತ್ತಿರುವ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಇದೀಗ ಇರಿಸಿದ್ದ ಬೋನ್‍ನೊಳಗೆ ಹುಲಿ ಸಿಗದ ಹಿನ್ನೆಲೆಯಲ್ಲಿ ಬೋನ್ ಹಾಗೂ ಆಡನ್ನು ಬೇರೆ ಸ್ಥಳದಲ್ಲಿ ಇಟ್ಟು ಹುಲಿಯನ್ನು ಹಿಡಿಯಲು ಸಿದ್ಧತೆ ಕೈಗೊಂಡಿದ್ದಾರೆ. ಆದರೆ ಹುಲಿಯು ಸೆರೆ ಸಿಗದ ಕಾರಣ ಮೈಲಾದ್‍ಪುರ ಬಾಡಗ ಬಾಣಂಗಾಲ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಕಾರ್ಮಿಕರು ತೋಟದಲ್ಲಿ ಭಯದಿಂದಲೇ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಮೈಲಾದ್‍ಪುರ ಕಾಫಿ ತೋಟಗಳಲ್ಲಿ ಮಾಲೀಕರು ಇಲ್ಲದ ಸುಮಾರು ಜಾನುವಾರುಗಳು ತೋಟದೊಳಗೆ ಮೇಯುತ್ತಿದ್ದು, ಇತ್ತೀಚೆಗೆ ಹುಲಿ ಧಾಳಿ ನಡೆಸಿದ ಸಂದರ್ಭ ಮೃತಪಟ್ಟ ಜಾನುವಾರಗಳ ಮಾಲೀಕರು ಯಾವದೇ ಮಾಹಿತಿಯನ್ನು ನೀಡದಿರುವದು ಅಚ್ಚರಿ ಮೂಡಿಸಿದೆ.

ಚಿತ್ರ -ವರದಿ : ವಾಸು