ಮಡಿಕೇರಿ, ಸೆ. 23: ಅಂಗನವಾಡಿ ಕಾರ್ಯಕರ್ತೆಯನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಇಲ್ಲಿಗೆ ಸಮೀಪದ ಮರಗೋಡು ಗ್ರಾ.ಪಂ. ವ್ಯಾಪ್ತಿಯ ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ನಡೆದಿದೆ.
ಕಟ್ಟೆಮಾಡು ಪರಂಬು ಪೈಸಾರಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಈ ಹಿಂದೆಯೇ ಗ್ರಾ.ಪಂ.ಗೆ, ಇಲಾಖೆಗೆ ದೂರು ಸಲ್ಲಿಸಿದ್ದರೂ ಯಾವದೇ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಇಂದು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಅಂಗನವಾಡಿ ಕೇಂದ್ರದ ಎದುರು ಜಮಾಯಿಸಿ ಕಾರ್ಯಕರ್ತೆಯನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಿದರು. ವಿಷಯ ತಿಳಿದ ಮರಗೋಡು ಗ್ರಾ.ಪಂ. ಅಧ್ಯಕ್ಷ ಬಿದ್ರುಪಣೆ ಮೋಹನ್, ಸದಸ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ದಮಯಂತಿ, ಮೇಲ್ವಿಚಾರಕಿ ಸವಿತಾ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು.
ಅಂತಿಮವಾಗಿ ಮುಂದಿನ 15 ದಿನಗಳೊಳಗೆ ಕಾರ್ಯಕರ್ತೆಯನ್ನು ವರ್ಗಾವಣೆ ಮಾಡುವದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಯಿತು.