ಸೋಮವಾರಪೇಟೆ, ಸೆ. 23: ಪಟ್ಟಣಕ್ಕೆ ಸಮೀಪದ ಕರ್ಕಳ್ಳಿ ಗ್ರಾಮದಲ್ಲಿ ಹೆಜ್ಜೇನುಗಳ ಹಿಂಡು ಧಾಳಿ ನಡೆಸಿದ ಪರಿಣಾಮ ವೃದ್ಧರೋರ್ವರು ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಪಟ್ಟಣದ ಸುತ್ತಮುತ್ತ ಕಳೆದ ಹಲವಾರು ವರ್ಷಗಳಿಂದ ಭಿಕ್ಷೆ ಸಂಗ್ರಹಿಸುತ್ತಿದ್ದ ರಾಮೇಗೌಡ (ದಾಸಯ್ಯ-65) ಎಂಬವರು ಇಂದು ಕರ್ಕಳ್ಳಿಯತ್ತ ತೆರಳುತ್ತಿದ್ದ ಸಂದರ್ಭ ಎತ್ತಲಿಂದಲೋ ಹಾರಿ ಬರುತ್ತಿದ್ದ ಹೆಜ್ಜೇನುಗಳ ಹಿಂಡು ಧಾಳಿ ನಡೆಸಿದ್ದು, 200ಕ್ಕೂ ಅಧಿಕ ಹುಳುಗಳು ತೀವ್ರ ತರದಲ್ಲಿ ಕಚ್ಚಿವೆ. ರಸ್ತೆಯಲ್ಲಿಯೇ ನರಳಾಡುತ್ತಿದ್ದ ದಾಸಯ್ಯ ಅವರ ಸ್ಥಿತಿಯ ಬಗ್ಗೆ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ ಮೇರೆ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಅಲ್ಯೂಮಿನಿಯಂ ಸೂಟ್ ಮೂಲಕ ಸ್ವರಕ್ಷಣೆ ಮಾಡಿಕೊಂಡು, ವಿದ್ಯುತ್ ಸಂಚಾರ ಸ್ಥಗಿತಗೊಳಿಸಿ ನಂತರ ದಾಸಯ್ಯ ಅವರಿಗೆ ನೀರು ಹಾಯಿಸಿದ್ದಾರೆ.

ಹೆಜ್ಜೇನುಗಳು ನೀರಿನ ರಭಸಕ್ಕೆ ಬೇರೆಡೆ ಹಾರಿದ ನಂತರ ದಾಸಯ್ಯ ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿ ಎನ್.ಎ. ಲವ, ಹೆಚ್. ಮಹೇಂದ್ರರ್, ಸಿಬ್ಬಂದಿಗಳಾದ ಸಂತೋಷ್, ಲಕ್ಷ್ಮೀಕುಮಾರ್, ಸುನಿಲ್, ಯಲ್ಲಪ್ಪ, ಲೋಕೇಶ್ ಅವರುಗಳು ಸ್ಥಳಕ್ಕಾಗಮಿಸಿ ದಾಸಯ್ಯ ಅವರನ್ನು ರಕ್ಷಿಸಿದರು.

ಇದೇ ಮಾರ್ಗವಾಗಿ ತೆರಳುತ್ತಿದ್ದ ವಿದ್ಯಾರ್ಥಿಗಳಾದ ರಿತೇಶ್, ಮುಕ್ತಾ ಶೆಟ್ಟಿ, ವಿಕಾಸ್ ಶೆಟ್ಟಿ, ವಿಕೇಶ್ ಶೆಟ್ಟಿ ಅವರುಗಳ ಮೇಲೂ ಹೆಜ್ಜೇನು ಧಾಳಿ ನಡೆಸಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ನಂತರ ಮನೆಗೆ ಮರಳಿದ್ದಾರೆ.