ಮಡಿಕೇರಿ, ಸೆ. 23: ದಕ್ಷಿಣ ಕೊಡಗಿನ ತೆರಾಲು ಗ್ರಾಮದಲ್ಲಿ ಖಾಸಗಿ ಸಂಸ್ಥೆಯ ಹೆಸರಿನಲ್ಲಿ ಉತ್ತರ ಪ್ರದೇಶದ ದಂಪತಿಗಳು ಸುಮಾರು 90 ಏಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಕಾನೂನು ಹೋರಾಟ ನಡೆಸುವದಾಗಿ ಕೊಡಗು ಏಕೀಕರಣ ರಂಗ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಕೀಕರಣ ರಂಗದ ಪ್ರಮುಖರಾದ ಎ.ಎ.ತಮ್ಮು ಪÀÇವಯ್ಯ, 1991ರಲ್ಲಿ ಟ್ರಸ್ಟ್‍ವೊಂದು ತೆರಾಲು ಗ್ರಾಮದಲ್ಲಿ 55 ಏಕರೆ ಜಮೀನನ್ನು ಖರೀದಿಸುವ ಮೂಲಕ ಖಾಸಗಿ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸುವ ಮೂಲಕ ಸುಮಾರು 300 ಎಕರೆಯಷ್ಟು ಪ್ರದೇಶವನ್ನು ತನ್ನ ಸ್ವಾಧೀನದಲ್ಲಿ ಇಟ್ಟು ಕೊಂಡಿದೆ ಎಂದು ಆರೋಪಿಸಿದರು.

ಈ ಒಟ್ಟು ಭೂಮಿಯಲ್ಲಿ ಸುಮಾರು 90 ಎಕರೆಯಷ್ಟು ಪ್ರದೇಶ ಸರ್ಕಾರಿ ಜಾಗವಾಗಿದ್ದು, ಈ ಟ್ರಸ್ಟ್‍ನ ಅಕ್ರಮಗಳಿಗೆ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಪೆÀÇಲೀಸ್ ಇಲಾಖೆ ಬೆಂಬಲ ನೀಡಿರುವ ಬಗ್ಗೆ ಸಂಶಯವಿದೆಯೆಂದು ಆರೋಪಿಸಿದರು. ಭೂ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಈಗಾಗಲೆ ದೂರು ನೀಡಿ ನೈಜಾಂಶವನ್ನು ವಿವರಿಸಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗಿದೆ. ಭೂ ಅಕ್ರಮಗಳಿಗೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದು, ಜಿಲ್ಲಾಡಳಿತ ತಕ್ಷಣ ಸರ್ವೇ ಕಾರ್ಯ ನಡೆಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಟ್ರಸ್ಟ್ ವಿರುದ್ಧ ಕಾನೂನು ಹೋರಾಟ ನಡೆಸುವದಾಗಿ ಅವರು ತಿಳಿಸಿದರು.

ಸರ್ಕಾರಿ ಜಾಗವನ್ನು ಅಕ್ರಮವಾಗಿ ಖರೀದಿಸಿರುವ ದಂಪತಿಗಳು ಅಕ್ರಮ ರೀತಿಯಲ್ಲೆ ಮಾರಾಟ ಮಾಡಿದ್ದಾರೆ. 180 ಏಕರೆ ಪ್ರದೇಶದಲ್ಲಿ ಕಾಫಿ ತೋಟವಿದೆಯೆಂದು ದಾಖಲೆ ಸೃಷ್ಟಿಸಿದ್ದಾರೆ. ಆದರೆ, ಒಂದೇ ಒಂದು ಕಾಫಿ ಗಿಡ ಇಲ್ಲವೆಂದು ವಿವರಿಸಿದ ತಮ್ಮು ಪೂವಯ್ಯ, 1991 ರಲ್ಲಿ ವಾರ್ಷಿಕ ಆದಾಯ ಕೇವಲ 80 ರಿಂದ 90 ಸಾವಿರವೆಂದು ಮಾಹಿತಿ ನೀಡಿದ್ದ ದಂಪತಿಗಳು, ಏಕಾಏಕಿ ಸುಮಾರು 3 ಕೋಟಿಯಷ್ಟು ಬೆಲೆ ಬಾಳುವ ಆಸ್ತಿ ಖರೀದಿಸಿದ್ದು ಹೇಗೆ ಎಂದು ಪ್ರಶ್ನಿಸಿದರು.

2011ರ ವರೆಗೆ ಈ ಪ್ರಕರಣದ ದಂಪತಿಗಳು 192.78 ಏಕರೆಯಷ್ಟು ಜಮೀನು ಖರೀದಿ ಮಾಡಿದ್ದಾರೆ. ಇದರಲ್ಲಿ 131.51 ಏಕರೆಗೆ ಖಾತೆಯಾಗಿದೆ. ಆದರೆ, ಉಳಿದ 61.27 ಏಕರೆ ಜಮೀನಿನ ಖಾತೆ ಬದಲಾವಣೆಯಾಗದೆ ಕಂದಾಯ ಇಲಾಖೆಯಲ್ಲೆ ಬಾಕಿ ಉಳಿದಿದೆಯೆಂದ ತಮ್ಮು ಪÀÇವಯ್ಯ, ದಂಪತಿಗಳು ತೆರಾಲು ಗ್ರಾಮದ ವಿವಿಧ ಸರ್ವೇ ನಂಬರ್‍ಗಳಲ್ಲಿ ಗದ್ದೆಯನ್ನು ಖರೀದಿ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಕೃಷಿಯೇತರ ಮೂಲಗಳಿಂದ ವಾರ್ಷಿಕವಾಗಿ 2 ಲಕ್ಷಕ್ಕಿಂತ ಹೆಚ್ಚು ಆದಾಯ ಪಡೆಯುತ್ತಿಲ್ಲ ಎನ್ನುವ ಆಧಾರದಲ್ಲಿ ಕೃಷಿ ಭೂಮಿಯ ಖಾತೆ ಬದಲಾವಣೆಗೆ ಅನುಮತಿ ನೀಡಿದೆ. ತೆರಾಲು ಗ್ರಾಮದಲ್ಲಿ ಯಾವದೇ ಕೃಷಿ ಚಟುವಟಿಕೆಯಲ್ಲಿ ತೊಡಗದ ದಂಪತಿಗಳು ಕೃಷಿಯೇತರ ಆದಾಯ ಮೂಲವಿಲ್ಲದೆಯೂ ಸುಮಾರು 192 ಏಕರೆ ಜಮೀನು ಖರೀದಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಇಷ್ಟು ಜಮೀನು ಖರೀದಿಸಲು ಕೋಟ್ಯಂತರ ರೂಪಾಯಿ ಬೇಕಾಗುತ್ತದೆ. ಆದ್ದರಿಂದ ಈ ಹಣ ಕಪ್ಪು ಹಣ ಎನ್ನುವ ಸಂಶಯ ವ್ಯಕ್ತವಾಗುತ್ತಿದ್ದು, ಆದಾಯ ತೆರಿಗೆ ಇಲಾಖೆಯು ಈ ಪ್ರಕರಣದ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.

ಗಿರಿಜನರು ವಾಸವಾಗಿದ್ದ ಪ್ರದೇಶವನ್ನು ಕೂಡ ತಮ್ಮ ವಶಕ್ಕೆ ಪಡೆದು ಹಾಡಿಯ ನಿವಾಸಿಗಳನ್ನು ಅತಂತ್ರಗೊಳಿಸಿದ್ದಾರೆ. ಸ್ಥಳೀಯ ಪೆÀÇಲೀಸ್, ಅರಣ್ಯ, ಕಂದಾಯ ಇಲಾಖೆಯ ಮೂಲಕ ಪ್ರಭಾವ ಬಳಸಿ ಈ ದಂಪತಿಗಳು ಸ್ಥಳೀಯ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ವನ್ಯಜೀವಿಗಳನ್ನು ಸಂರಕ್ಷಿಸುವ ಹೆಸರಿನಲ್ಲಿ ವಂಚನೆ ನಡೆಯುತ್ತಿದೆಯೆಂದು ಆರೋಪಿಸಿದ ತಮ್ಮು ಪÀÇವಯ್ಯ, ತೆರಾಲು ಗ್ರಾಮದಲ್ಲಿ ದಂಪತಿಗಳ ಚಟುವಟಿಕೆಗಳಿಂದಾಗಿ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಉದ್ಭವವಾಗುವ ಎಲ್ಲಾ ಸಾಧ್ಯತೆಗಳಿದೆ.

ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಕೊಡಗು ಏಕೀಕರಣ ರಂಗ ಕಲೆ ಹಾಕಿರುವ ಸಮಗ್ರ ದಾಖಲೆಗಳನ್ನು ಪರಿಶೀಲಿಸಿ ದಂಪತಿಗಳ ವಿರುದ್ಧ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಅನ್ವಯ 2012ರ ಸುತ್ತೋಲೆಯಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ದಂಪತಿಗಳ ಹೆಸರಿನಲ್ಲಿರುವ ಕೃಷಿ ಭೂಮಿ ಖಾತೆಯನ್ನು ರದ್ದುಪಡಿಸಬೇಕು. ದಂಪತಿಗಳ ಜಮೀನಿನ ವಿವರಗಳನ್ನು ಅವರ ಆಧಾರ್ ಸಂಖ್ಯೆಗೆ ನೋಂದಾಯಿಸಲು ಮತ್ತು ಆಧಾರ್ ಸಂಖ್ಯೆಯನ್ನು ಅವರ ಪ್ಯಾನ್ ಖಾತೆಯೊಂದಿಗೆ ಜೋಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. 1991ರಿಂದ ಈ ದಂಪತಿಗಳ ಅಕ್ರಮ ಭೂ ಒತ್ತುವರಿಗೆ ಸಹಕಾರ ನೀಡಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಮತ್ತು ಶಾಮೀಲಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಮ್ಮು ಪÀÇವಯ್ಯ ಒತ್ತಾಯಿಸಿದರು.

ಕೊಡಗು ಏಕೀಕರಣ ರಂಗದ ಮನವಿಗೆ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ನ್ಯಾಯಾಲಯದ ಮೂಲಕ ನ್ಯಾಯ ಪಡೆಯುವದಾಗಿ ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಟಿ.ಎಂ. ಸೋಮಯ್ಯ, ಪ್ರಮುಖರಾದ ಪಿ.ಎಂ. ಮುತ್ತಣ್ಣ ಹಾಗೂ ಬಿ.ಎಸ್. ತಮ್ಮಯ್ಯ ಉಪಸ್ಥಿತರಿದ್ದರು.