ಮಡಿಕೇರಿ, ಸೆ. 23: ದಕ್ಷಿಣ ಕೊಡಗಿನ ಪ್ರಮುಖ ಕೊಡವ ಸಮಾಜಗಳ ಪೈಕಿ ಒಂದಾಗಿರುವ ಪೊನ್ನಂಪೇಟೆ ಕೊಡವ ಸಮಾಜಕ್ಕೆ ತಾ. 24ರಂದು (ಇಂದು) ಚುನಾವಣೆ ನಡೆಯಲಿದೆ. 2017-20ನೇ ಸಾಲಿನ ಮೂರು ವರ್ಷಗಳ ಅಧಿಕಾರಾವಧಿಗೆ ಚುನಾವಣೆ ನಿಗದಿಯಾಗಿದ್ದು, ಒಟ್ಟು 12 ನಿರ್ದೇಶಕರ ಸ್ಥಾನಕ್ಕೆ 16 ಮಂದಿ ಸ್ಪರ್ಧೆಯಲ್ಲಿದ್ದು, ಚುನಾವಣಾ ಕಣ ಪ್ರತಿಷ್ಠೆಯ ತಿರುವು ಪಡೆದಿದೆ. ಸಮಾಜದ ಆಡಳಿತ ಮಂಡಳಿಗೆ ಒಟ್ಟು 13 ನಿರ್ದೇಶಕರ ಸ್ಥಾನವಿದ್ದು, ಇದರಲ್ಲಿ ಓರ್ವರು ಖಾಯಂ ಆಹ್ವಾನಿತ ನಿರ್ದೇಶಕರಾಗಿದ್ದಾರೆ. ಸಮಾಜದ ಸ್ಥಳದಾನಿ ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಅವರು ಖಾಯಂ ಆಹ್ವಾನಿತರಾಗಿದ್ದಾರೆ. ಉಳಿದ 12 ನಿರ್ದೇಶಕರ ಸ್ಥಾನದ ಪೈಕಿ ಒಂಭತ್ತು ಸಾಮಾನ್ಯ ಹಾಗೂ 3 ಮಹಿಳಾ ಮೀಸಲು ಸ್ಥಾನವಿದೆ.
ಪುರುಷರ 9 ನಿರ್ದೇಶಕ ಸ್ಥಾನಕ್ಕೆ (ಸಾಮಾನ್ಯ) 12 ಮಂದಿ ಕಣದಲ್ಲಿದ್ದಾರೆ. ಮಹಿಳಾ ನಿರ್ದೇಶಕರ 3 ಸ್ಥಾನಕ್ಕೆ ನಾಲ್ಕು ಮಂದಿ ಕಣದಲ್ಲಿದ್ದು ಚುನಾವಣೆ ಕುತೂಹಲ ಮೂಡಿಸಿದೆ. ಸಮಾಜ ಒಟ್ಟು 3,574 ಸದಸ್ಯರನ್ನು ಹೊಂದಿದ್ದು, ಈ ಪೈಕಿ 2993 ಮಂದಿ ಮತದ ಹಕ್ಕು ಹೊಂದಿದ್ದಾರೆ. ತಾ. 24ರಂದು (ಇಂದು) ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಚುನಾವಣೆ ನಡೆಯಲಿದ್ದು, 4 ಗಂಟೆಯ ಬಳಿಕ ಮತ ಎಣಿಕೆ ನಡೆಯಲಿದೆ. ನಿವೃತ್ತ ತಹಶೀಲ್ದಾರ್ ಕಳ್ಳೇಂಗಡ ಶಂಭು ಗಣಪತಿ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.