ಶ್ರೀಮಂಗಲ, ಸೆ. 23: ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ. 40,01,521 ನಿವ್ವಳ ಲಾಭಗಳಿಸಿದೆ. ಇದರಿಂದ ಸದಸ್ಯರಿಗೆ ಶೇ. 20 ರಷ್ಟು ಡಿವಿಡೆಂಡ್ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ತಡಿಯಂಗಡ ಬಿ. ಕರುಂಬಯ್ಯ ಹೇಳಿದರು.
ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘವು ಸತತವಾಗಿ ಮೂರು ವರ್ಷಗಳಿಂದ ಆಡಿಟ್ ವರ್ಗೀಕರಣ ದಲ್ಲಿ “ಎ” ತರಗತಿ ಮಾನ್ಯತೆ ಪಡೆದಿದೆ. ಸಂಘದಲ್ಲಿ ಒಟ್ಟು 2952 ಸದಸ್ಯರು ನೋಂದಾವಣಿಯಾಗಿದ್ದು, ಅವರಿಂದ ಪಾಲು ಬಂಡವಾಳ ರೂ. 1ಕೋಟಿ 13 ಲಕ್ಷ ಸಂಗ್ರಹವಾಗಿದೆ. ದುಡಿಯುವ ಬಂಡವಾಳ ರೂ. 24 ಕೋಟಿ 26 ಲಕ್ಷ, ಠೇವಣಿ ಮೊತ್ತ ರೂ. 12 ಕೋಟಿ 60 ಲಕ್ಷ ಇರುತ್ತದೆ. ಸಂಘವು 2016-17ನೇ ಸಾಲಿನ ಒಟ್ಟು ರೂ. 119 ಕೋಟಿ ವಹಿವಾಟು ನಡೆಸಿದೆ. ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತಿದೆ. ಯಶಸ್ವಿನಿ ಯೋಜನೆಯಲ್ಲಿ 1325 ಮಂದಿ ಸದಸ್ಯರ ನೋಂದಾವಣಿ ಆಗಿರುತ್ತದೆ.
ಸಂಘವು 2017-18 ನೇ ಸಾಲಿನ ಒಟ್ಟು 815 ಸದಸ್ಯರಿಗೆ ರೂ. 10 ಕೋಟಿ 4 ಲಕ್ಷ ಕೆ.ಸಿ.ಸಿ ಸಾಲ ನೀಡಿದ್ದು, ಜಾಮೀನು ಸಾಲ ರೂ. 3 ಕೋಟಿ, ಗೊಬ್ಬರ ಸಾಲ ರೂ. 60 ಲಕ್ಷ ಹಾಗೂ ಕೃಷಿಯೇತರ ಸಾಲ ರೂ. 7 ಕೋಟಿ ವಿತರಣೆ ಮಾಡಿದೆ. ಸಂಘದಿಂದ ಆಭರಣ ಸಾಲ, ಚಿನ್ನಾಭರಣ ಖರೀದಿ ಸಾಲ, ಸ್ವ-ಸಹಾಯ ಗುಂಪು, ಜೆ.ಎಲ್.ಜೆ ಸಾಲಗಳು, ವ್ಯಾಪಾರಾ ಭಿವೃದ್ಧಿ ಸಾಲ, ಠೇವಣಿ ಸಾಲ, ಜಾಮೀನು ಸಾಲ, ಗೊಬ್ಬರ ಸಾಲ, ಗೊಬ್ಬರ ಮಾರಾಟ, ನ್ಯಾಯಬೆಲೆ ಅಂಗಡಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರ್ಕಾರದಿಂದ ರೂ. 50 ಸಾವಿರ ಸಾಲ ಮನ್ನಾ ಮಾಡುವ ಘೋಷಣೆ ಅನುಷ್ಠಾನ ಆದರೆ 815 ಸದಸ್ಯರಿಗೆ ರೂ. 3,65,10,600 ಸಾಲ ಮನ್ನಾ ಸೌಲಭ್ಯ ದೊರೆಯುತ್ತದೆ ಎಂದರು. ಮಹಾಸಭೆಯಲ್ಲಿ ಲೆಕ್ಕಪತ್ರ ಮಂಡನೆ, ಮುಂದಿನ ವರ್ಷದ ಕ್ರಿಯಾಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮಚ್ಚಮಾಡ ಎನ್. ಸುಮಂತ್, ಸಂಘದ ಸಿ.ಇ.ಒ ಚೆಟ್ಟಂಗಡ ಎಸ್. ಸೀತಮ್ಮ ಮತ್ತು ನಿರ್ದೇಶಕರುಗಳಾದ ಕುಂಞಂಗಡ ಬಿ. ಕೃಷ್ಣ, ಚೊಟ್ಟೆಯಂಡ ಮಾಡ ಜೆ. ರಂಜಿ, ತೀತಿರ ಕೆ. ಸೋಮಣ್ಣ, ಮಚ್ಚಮಾಡ ಯು. ಮುತ್ತಪ್ಪ, ಮಚ್ಚಮಾಡ ಎಂ.ನಾಚಪ್ಪ, ಉಳುವಂಗಡ ಪಿ. ಸರೋಜ, ಚೆಟ್ಟಂಡ್ರ ಯು.ರಾಣಿ, ಹೆಚ್.ಆರ್. ಗಣೇಶ್ ಹಾಗೂ ಮೇಲ್ವಿಚಾರಕ ಬಿ.ಜೆ. ಇಂದ್ರೇಶ್ ಉಪಸ್ಥಿತರಿದ್ದರು.