ಮಡಿಕೇರಿ, ಸೆ. 23: ಅಪರೂಪವೆಂಬಂತೆ ಸಂತೆ ದಿನವಾದ ಶುಕ್ರವಾರ ಮಡಿಕೇರಿಯಲ್ಲಿ ಬೆಳಿಗ್ಗೆಯಿಂದಲೇ ಉರಿ ಬಿಸಿಲು ವಾತಾವರಣ ಕಾಣಸಿಕೊಂಡು, ದಸರಾ ರಜೆಯ ನಡುವೆ ಸಾಕಷ್ಟು ಪ್ರವಾಸಿಗರು ಸೇರಿದಂತೆ ಜಿಲ್ಲಾ ಕೇಂದ್ರದತ್ತ ಗ್ರಾಮೀಣ ಜನತೆ ಸಂತೆಗೆ ಬಂದಿದ್ದರು.ಈ ನಡುವೆ ಆರೋಗ್ಯದ ಕಾಳಜಿಯಿಂದಲೇ ನಗರದ ಸುದರ್ಶನ ವೃತ್ತದ ಬಳಿ, 2015-2016ನೇ ಸಾಲಿನಲ್ಲಿ ಮಡಿಕೇರಿ ಕೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಶಾಸಕರ ಅನುದಾನ ರೂ. 9.95 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಬಾಗಿಲು ಮುಚ್ಚಿಕೊಂಡಿರುವದು ಗೋಚರಿಸಿತು. ಇತ್ತ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರ
(ಮೊದಲ ಪುಟದಿಂದ) ಸಹಿತ ಜನತೆ ಆಗಮಿಸುವ ರಾಜಾಸೀಟ್ ಬಳಿ ವಾರದ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿರುವ, ಇನ್ನೊಂದು ನೂತನ ಕುಡಿಯುವ ನೀರಿನ ಘಟಕ ಕೂಡ ಬಾಗಿಲು ಮುಚ್ಚಿ ಕೊಂಡಿರುವದು ಕಂಡು ಬಂತು.
ಈ ನೂತನ ಘಟಕವನ್ನು 2016-2017ನೇ ಸಾಲಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ ಸ್ಥಾಪಿಸಿದ್ದಾಗಿದ್ದು, ಈ ಮೇಲಿನ ಎರಡು ಕುಡಿಯುವ ನೀರಿನ ಘಟಕಗಳನ್ನು ಕೊಡಗು ನಿರ್ಮಿತಿ ಕೇಂದ್ರದಿಂದ ನಿರ್ವಹಿಸುತ್ತಿರುವದಾಗಿದೆ.
ಈ ಯೋಜನೆಯ ನೀರು ಶುದ್ಧೀಕರಣ ಘಟಕಕ್ಕೆ ಬೆಂಗಳೂರಿನ ಖಾಸಗಿ ಏಜೆನ್ಸಿಯೊಂದರ ಬಾಬು ಎಂಬ ವ್ಯಕ್ತಿ ಯೋಜನೆಯ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಹೊಂದಿದ್ದು, ಶೆಡ್ ನಿರ್ಮಾಣ ದೊಂದಿಗೆ ಕಾಮಗಾರಿ ನಿರ್ಮಿತಿ ಕೇಂದ್ರದಿಂದ ಕೈಗೊಂಡಿದ್ದಾಗಿದೆ. ರಾಜಾಸೀಟ್ ಬಳಿ ಆರೆಂಟು ತಿಂಗಳ ವ್ಯತ್ಯಾಸದಲ್ಲಿ ಘಟಕದ ವೆಚ್ಚ ರೂ. 12.90 ಲಕ್ಷವೆಂದು ನಮೂದಿಸ ಲಾಗಿದೆ.
ಸರಕಾರದ ಆಶಯದಂತೆ ಈ ಕುಡಿಯುವ ನೀರಿನ ಘಟಕದಿಂದ ಒಬ್ಬ ಸಾಮಾನ್ಯ ಗ್ರಾಹಕರಿಗೆ ರೂ. 5 ಮೊತ್ತಕ್ಕೆ 20 ಲೀ ನೀರು ಒದಗಿಸಬೇಕಿದೆ. ಇಲ್ಲಿ 1 ಲೀಟರ್ ನೀರಿಗೆ ಕೇವಲ 25 ಪೈಸೆಯಂತೆ ಇಲ್ಲಿನ ದರದಲ್ಲಿ ವಿತರಿಸಲಾಗುತ್ತಿದೆ. ಆದರೆ ಪ್ರಸಕ್ತ ಎರಡು ಘಟಕಗಳು ಬಾಗಿಲು ಹಾಕಿಕೊಂಡಿರುವ ಬಗ್ಗೆ ಸಾರ್ವಜನಿಕರು ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರ್ಮಿತಿ ಕೇಂದ್ರ ಹೇಳಿಕೆ : ಇಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಪ್ರಕಾರ, ಶುದ್ಧ ಕುಡಿಯುವ ನೀರಿನ ಘಟಕ ನೋಡಿಕೊಳ್ಳಲು ನಿಯೋಜಿಸಿರುವ ಸಿಬ್ಬಂದಿ ರಜೆಯಲ್ಲಿ ತೆರಳಿರುವ ಕಾರಣಕಷ್ಟೆ ಬಾಗಿಲು ಹಾಕಲಾಗಿದೆ. ಬದಲಾಗಿ ಜನಸಾಮಾನ್ಯರಿಗೆ ನೀರು ಮಿಕ್ಕ ದಿನಗಳಲ್ಲಿ ದೊರಕಲಿದೆ.
ಅಲ್ಲದೆ, ತಾಂತ್ರಿಕ ಸಮಸ್ಯೆ ಸರಿಪಡಿಸಿ ಮುಂದಿನ ದಿನಗಳಲ್ಲಿ ಸಂತೆ ದಿನವಾದ ಶುಕ್ರವಾರ ಹಾಗೂ ಶನಿವಾರ ಮತ್ತು ಭಾನುವಾರಗಳಂದು ಕಡ್ಡಾಯವಾಗಿ ಎಲ್ಲರಿಗೂ ನೀರು ಲಭಿಸುವಂತೆ ಕಾಳಜಿ ವಹಿಸಲಾಗುವದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಏಜೆನ್ಸಿ ಹೇಳಿಕೆ : ಪ್ರಸಕ್ತ ಸುದರ್ಶನ ಅತಿಥಿ ಗೃಹದ ಬಳಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಸರಬರಾಜುಗೊಳ್ಳುವಲ್ಲಿ ಸಮಸ್ಯೆಯಾಗಿದೆ. ಹೆಚ್ಚಿನ ಪ್ರಮಾಣದ ನೀರು ಶೇಖರಿಸಿ ಆ ಮೂಲಕ ಶುದ್ದೀಕರಿಸಿ ವಿತರಿಸಲು ತೊಡಕಾಗಿದ್ದು, ಪರ್ಯಾಯ ಸುಧಾರಣೆಗೆ ಪ್ರಯತ್ನಿಸಲಾಗುವದು ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ರಾಜಾಸೀಟ್ನಿಂದ ಕನಿಷ್ಟ 100 ಮೀಟರ್ ಅಸುಪಾಸಿನಲ್ಲಿ ಈ ಘಟಕ ಸ್ಥಾಪನೆಗೆ ಪ್ರಾರಂಭದಲ್ಲೇ ಪ್ರಾಚ್ಯವಸ್ತು ಇಲಾಖೆಯಿಂದ ತಡೆಯೊಡ್ಡಿದ್ದು, ಕಾನೂನಿನ ತೊಡಕುಗಳ ನಡುವೆ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಕೋರಿಕೆಯಿಂದ ಈ ಘಟಕಕ್ಕೆ ಅವಕಾಶ ದೊರೆತಿದ್ದು, ಮುಂದೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಗಮನಹರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಚಿತ್ರ : ವರದಿ: ಟಿ.ಜಿ. ಸತೀಶ್.