ಸಿದ್ದಾಪುರ, ಸೆ. 23: ಕಂದಾಯ ಹಾಗೂ ಆಹಾರ ಇಲಾಖಾಧಿಕಾರಿಗಳು ಸೇರಿದಂತೆ ಪ್ರಮುಖ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ನೆಲ್ಯಹುದಿಕೇರಿ ಗ್ರಾಮಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಗ್ರಾಮ ಸಭೆಯನ್ನು ಮುಂದೂಡಲಾಯಿತು.

ನೆಲ್ಯಹುದಿಕೇರಿ ಗ್ರಾ.ಪಂ. ಗ್ರಾಮಸಭೆ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಪದ್ಮಾವತಿ ಅಧ್ಯಕ್ಷತೆಯಲ್ಲಿ ನಿಗದಿಯಾಗಿತ್ತು. ಆದರೆ ಗ್ರಾಮಸಭೆಗೆ ಬಹುತೇಕ ಇಲಾಖೆಯ ಅಧಿಕಾರಿಗಳು ಆಗಮಿಸದ ಕಾರಣ ಸಭೆಯ ಆರಂಭದಲ್ಲೇ ಗ್ರಾಮಸ್ಥರು ಅಧಿಕಾರಿಗಳಿಲ್ಲದೆ ಸಭೆ ನಡೆಸಿ ಪ್ರಯೋಜನವಿಲ್ಲವೆಂದರು. ಆಕ್ರೋಶಗೊಂಡ ಗ್ರಾಮಸ್ಥರು ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಭೆಗೆ ಕರೆಸುವಂತೆ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ಅಬ್ದುಲ್ ರಜಾಕ್, ಗ್ರಾಮದಲ್ಲಿ ಪಡಿತರ ಚೀಟಿಯಲ್ಲಿ ಗೊಂದಲಗಳಿದ್ದು, ಆಹಾರ ಇಲಾಖೆಯ ಯಾವದೇ ಅಧಿಕಾರಿ ಸಭೆಗೆ ಹಾಜರಾಗಿಲ್ಲ. ಗ್ರಾಮಸ್ಥರ ಸಮಸ್ಯೆಗೆ ಸಮರ್ಪಕ ಉತ್ತರ ಸಿಗಬೇಕಾದರೆ ಅಧಿಕಾರಿಗಳನ್ನು ಸಭೆಗೆ ಕರೆಸಲು ಒತ್ತಾಯಿಸಿದರು.

ಇದೇ ಸಂದರ್ಭ ಪಿ.ಆರ್ ಭರತ್ ಸೇರಿದಂತೆ ಕೆಲ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದು, ಈ ಬಗ್ಗೆ ಅಧಿಕಾರಿಗಳು ವಿವರಣೆ ನೀಡಬೇಕು. ಆದರೇ ಸಭೆಯಲ್ಲಿ ಅಧಿಕಾರಿಗಳೇ ಇಲ್ಲದ ಮೇಲೆ ಸಭೆ ನಡೆಸಿ ಪ್ರಯೋಜನವಿಲ್ಲವೆಂದರು. ಈ ಸಂದರ್ಭ ಗ್ರಾಮಸ್ಥರು ಧ್ವ್ವನಿಗೂಡಿಸಿ, ಸಭೆಯನ್ನು ಮುಂದೂಡುವಂತೆ ನೋಡಲ್ ಅಧಿಕಾರಿಗಳನ್ನು ಒತ್ತಾಯಿಸಿದರು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ನೋಡಲ್ ಅಧಿಕಾರಿ ಗ್ರಾಮಸಭೆಯನ್ನು ಮುಂದೂಡಿದರು.

ಸಭೆಯಲ್ಲಿ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ. ಸದಸ್ಯೆ ಸುಹದಾ ಆಶ್ರಫ್, ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ ಸೇರಿದಂತೆ ಗ್ರಾ.ಪಂ. ಸದಸ್ಯರು ಇದ್ದರು.