ಮಡಿಕೇರಿ, ಸೆ. 23: ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಯೊಬ್ಬಳನ್ನು ಆಕೆಯ ತಂಗಿಯ ಎದುರೇ ಆಟೋ ಚಾಲಕನೊಬ್ಬ ಅಪಹರಿಸಿರುವ ಘಟನೆ ಕಳೆದ ಜುಲೈ 21ರಂದು ವೀರಾಜಪೇಟೆಯಲ್ಲಿ ನಡೆದಿದೆ. ಆರೋಪಿ ಆಟೋ ಚಾಲಕ ವಿಘ್ನೇಶ್ ಹಾಗೂ ಕಾಲೇಜು ವಿದ್ಯಾರ್ಥಿನಿ 16ರ ಹರೆಯದಾಕೆ ತಿಂಗಳು ಎರಡು ಕಳೆದಿದ್ದರೂ ಪತ್ತೆಯಾಗದಿರುವದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಚೆಲುವರಾಜು ಎಂಬವರ ಇಬ್ಬರು ಪುತ್ರಿಯರು ತಾ. 21.7.2017ರಂದು ಬೆಳಿಗ್ಗೆ 8.45ರ ವೇಳೆ ಮನೆಯಿಂದ ತೆರಳಿದ್ದಾರೆ. ಅಲ್ಲಿನ ಗಡಿಯಾರ ಕಂಬದ ಬಳಿ ತಲಪುವಷ್ಟರಲ್ಲಿ ಕಿರಿಯ ಪುತ್ರಿ ತನ್ನ ಶಾಲೆಯ ಕಡೆ ಹೊರಟರೆ, ಹಿರಿಯಾಕೆ ಗಡಿಯಾರ ಕಂಬದ ಬಳಿ ಕಾಲೇಜು ಕಡೆ ಹೋಗ ಲೆಂದು ತಂಗಿಯಿಂದ ಬೇರ್ಪಟ್ಟಿದ್ದಾಳೆ. ನಾಲ್ಕು ಹೆಜ್ಜೆ ಮುನ್ನಡೆದ ತಂಗಿ ಅಕ್ಕಳತ್ತ ತಿರುಗಿ ನೋಡಲಾಗಿ

(ಮೊದಲ ಪುಟದಿಂದ) ಆಟೋ ಚಾಲಕ ಆಕೆಯನ್ನು ಕರೆದುಕೊಂಡು ಹೋಗುವದು ಗೋಚರಿಸಿದೆ. ಕಿರಿಯಾಕೆ ಸಂಜೆ ಶಾಲೆಯಿಂದ ಮನೆಗೆ ಹಿಂತೆರಳಿದಾಗ ಅಕ್ಕ ಮನೆಗೆ ಬಾರದಿರುವ ಹಿನ್ನೆಲೆ ಪೋಷಕರಿಗೆ ವಿಷಯ ಮುಟ್ಟಿಸಿದ್ದಾಳೆ.

ಮಗಳು ನಾಪತ್ತೆಯಾಗಿರುವ ಬಗ್ಗೆ ಜುಲೈ 22ರಂದು ಆಕೆಯ ಪೋಷಕರು ಕಿರಿಯ ಮಗಳು ನೀಡಿದ ಸುಳಿವಿನ ಮೇರೆಗೆ ಆಟೋ ಚಾಲಕ ವಿಘ್ನೇಶನ ವಿರುದ್ಧ ದೂರು ನೀಡಿ ತಮ್ಮ ಅಪ್ರಾಪ್ತೆ ಪುತ್ರಿಯನ್ನು ವಿಘ್ನೇಶ್ ಅಪಹರಣ ಮಾಡಿರುವದಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಆಟೋ ಚಾಲಕ ಹಾಗೂ ವಿದ್ಯಾರ್ಥಿನಿಯ ಪತ್ತೆಗೆ ಬಲೆ ಬೀಸಿದರೂ, ಯಾವದೇ ಸುಳಿವು ಲಭಿಸದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೊಬೈಲ್ ಕರೆ ಸಹಿತ ಏನೊಂದು ಮಾಹಿತಿ ಕಲೆ ಹಾಕಲು ಇದುವರೆಗೂ ಸಾಧ್ಯವಾಗಿಲ್ಲ.