ವೀರಾಜಪೇಟೆ, ಸೆ. 23: ಗ್ರಾಮಗಳು ಅಭಿವೃದ್ಧಿ ಹೊಂದಲು ಸರ್ಕಾರದ ಅನುದಾನಗಳು ದೊರೆಯಬೇಕು. ಸರ್ಕಾರಿ ಅಧಿಕಾರಿಗಳೇ ನಿಗದಿತ ಗ್ರಾಮ ಪಂಚಾಯಿತಿ ಸಭೆಯಲ್ಲಿ ಭಾಗವಹಿಸದಿದ್ದರೆ ಗ್ರಾವiಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವದಿಲ್ಲ. ಆದ್ದರಿಂದ ಗ್ರಾಮ ಸಭೆಗೆ ಗೈರು ಹಾಜರಾಗುವ ಇಲಾಖೆಯ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರನ್ನು ಕಡೆಗಣಿಸುತ್ತಿರುವ ಅಧಿಕಾರಿಗಳಿಗೆ ತಕ್ಷಣ ನೋಟೀಸ್ ಜಾರಿ ಮಾಡುವಂತೆ ಆರ್ಜಿ ಗ್ರಾಮ ಪಂಚಾಯಿತಿಯ ಗ್ರಾಮ ಸಂಪರ್ಕ ಸಭೆಯಲ್ಲಿ ತೀರ್ಮಾನಿಸಲಾಯಿತು.
ಆರ್ಜಿ ಗ್ರಾಮ ಪಂಚಾಯಿತಿಯ ಗ್ರಾಮ ಸಂಪರ್ಕ ಸಭೆ ಇತ್ತೀಚೆಗೆ ಅಧ್ಯಕ್ಷೆ ಹೆಚ್.ಎನ್. ಗಾಯಿತ್ರಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಗ್ರಾಮ ಸಭೆಗೆ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ಗೈರು ಹಾಜರಾಗುತ್ತಿರುವದರಿಂದ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ಸ್ಪಂದಿಸಲು ಸಾಧ್ಯವಾಗುವದಿಲ್ಲ. ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ನೋಡಲ್ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರನ್ನು ಒತ್ತಾಯಿಸಿದಾಗ ಮೇ¯ಧಿಕಾರಿಗಳಿಗೆ ದೂರು ನೀಡುವದಾಗಿ ತಿಳಿಸಿದರು. ಬಳಿಕ ಮಾತನಾಡಿದ ಮಹೇಶ್ ಗಣಪತಿ, ಕೊಡಗಿನಿಂದ ಕೇರಳಕ್ಕೆ ಹೋಗುವ ಮಾಕುಟ್ಟ ರಸ್ತೆಯಲ್ಲಿ ಹಲವು ತಿರುವುಗಳಿದ್ದು ಅರಣ್ಯ ಇಲಾಖೆಯವರು ಮರಗಳನ್ನು ಬೆಳೆಸಿ ಕೊಂಬೆಯನ್ನು ಕಡಿಯದಿರುವದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರಿಂದ ಅನೇಕ ವಾಹನಗಳು ಹೊಂಡಕ್ಕೆ ಉರುಳಿರುವ ಘಟನೆಗಳು ನಡೆದಿದ್ದು, ಇಲಾಖೆಯವರನ್ನು ಕೇಳಿದರೆ ಸೂಕ್ಷ್ಮ ಪರಿಸರ ತಾಣ ಎನ್ನುತ್ತಾರೆ, ಸೂಕ್ಷ್ಮ ಪರಿಸರವನ್ನು ಶೂನ್ಯ ಮಾಡುವಂತೆ ಗ್ರಾಮ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವಂತೆ ಆಗ್ರಹಿಸಿದರಲ್ಲದೆ, ಕೊಡಗಿನವರು ಪರಿಸರ ಪ್ರೇಮಿಗಳು, ಮರಗಳನ್ನು ಹೇಗೆ ಬೆಳೆಸಬೇಕೆಂಬದು ನಮಗೂ ಗೊತ್ತಿದೆ ಅರಣ್ಯ. ಇಲಾಖೆಯಿಂದ ಕಲಿಯಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ರಮೇಶ್ ಗ್ರಾ..ಪಂ. ವ್ಯಾಪ್ತಿಗೆ ಸೇರಿದ ಹೆದ್ದಾರಿಯಲ್ಲಿ ಅರಣ್ಯ ಇಲಾಖೆ ನೆಟ್ಟಿರುವ ಮರಗಳು ರಸ್ತೆಗೆ ಬಾಗಿದ್ದು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಇದರ ತೆರವಿಗೆ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ದೂರಿದರು. ಗ್ರಾಮ ಸಭೆಗೆ ಮುಖ್ಯವಾಗಿ ಆಹಾರ ಇಲಾಖೆ. ಲೋಕೋಪಯೋಗಿ, ಅಬಕಾರಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾದ ಕಾರಣ ಈ ಗ್ರಾಮ ಸಭೆಯಿಂದ ಗ್ರಾಮಸ್ಥರಿಗೆ ಯಾವದೇ ಪ್ರಯೋಜನವಾಗುವದಿಲ್ಲ ಎಂದು ಟೀಕಿಸಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಕಸವನ್ನು ಆರ್ಜಿ ಗ್ರಾಮದ ಪೆರುಂಬಾಡಿಯಲ್ಲಿ ಸುರಿಯುತ್ತಿದ್ದು ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಗ್ರಾಮಸ್ಥರು ಈ ಹಿಂದೆ ಪ್ರತಿಭಟನೆ ನಡೆಸಿದ ಹಿನ್ನೆಲೆ ಪ.ಪಂ. ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಗ್ರಾಮ ಸಭೆಯಲ್ಲಿ ಭಾಗವಹಿಸಿ ಇನ್ನು 15 ದಿನದಲ್ಲಿ ಪಂಚಾಯಿತಿಯ ಅನುದಾನದಲ್ಲಿ ಸರಿಯಾಗಿ ಕಸದ ನಿರ್ವಹಣೆ ಮಾಡುವ ಭರವಸೆ ನೀಡಿದರು. ಈ ಸಂದರ್ಭ ಗ್ರಾಮಸ್ಥ ಚುಪ್ಪಾ ನಾಗರಾಜ್ ಅವರು, ಪೆರುಂಬಾಡಿ ಚೆಕ್ ಪೋಸ್ಟ್ ಬಳಿಯಲ್ಲಿ ಪೊಲೀಸರು ಸಿ.ಸಿ. ಕ್ಯಾಮರಾವನ್ನು ಅಳವಡಿಸಿದ್ದರೂ ಅದು ಕೆಟ್ಟುಹೋಗಿ ಅನೇಕ ತಿಂಗಳು ಕಳೆದಿದೆ ಇನ್ನೂ ದುರಸ್ತಿಪಡಿಸಿಲ್ಲ. ಕೇರಳದಿಂದ ಕಸವನ್ನು ತಂದು ಪೆರುಂಬಾಡಿಯಲ್ಲಿ ಸುರಿದು ಹೋಗುತ್ತಾರೆ ಇದರ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ ಮೌನವಾಗಿರಲು ಕಾರಣವೇನು ಎಂದು ಪ್ರಶ್ನಿಸಿದರು.
ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್ ಮಾತನಾಡಿ, ಸರ್ಕಾರದಿಂದ ಈ ಬಾರಿ ಅನುದಾನದ ಕೊರತೆ ಇರುವದರಿಂದ ಗ್ರಾಮಗಳಲ್ಲಿ ಯಾವದೇ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಗ್ರಾಮ ಸಭೆಯಲ್ಲಿ ಪರಿಸರ, ಸ್ವಚ್ಛತೆ, ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಸ್ವಾಗತಿಸಿ, ವಂದಿಸಿದರು. ಚರ್ಚೆಯಲ್ಲಿ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.