ಭಾಗಮಂಡಲ, ಸೆ. 23: ಭಾಗಮಂಡಲದಲ್ಲಿ ದಿನೇ ದಿನೇ ಪ್ರವಾಸಿಗರ ಸಂಖ್ಯೆ ಅಧಿಕಗೊಳ್ಳುತ್ತಿದ್ದು, ಎಲ್ಲೆಡೆ ಕಸದ ರಾಶಿ ತುಂಬಿ ತುಳುಕುತ್ತಿದೆ. ಆದರೆ ಕಸವಿಲೇವಾರಿ ಘಟಕಕ್ಕೆ ಭೂಮಿ ಪೂಜೆ ನೆರವೇರಿದ್ದರೂ ಅರಣ್ಯ ಇಲಾಖೆ ಅದಕ್ಕೆ ತಡೆ ಹಿಡಿದಿದ್ದು, ಒಟ್ಟಾರೆ ಗ್ರಾ.ಪಂ.ಗೆ ಕಸ ವಿಲೇವಾರಿ ಮಾಡಲು ಜಾಗವಿಲ್ಲದಂತಾಗಿದೆ.ಭಾಗಮಂಡಲ ಹಾಗೂ ಪುಣ್ಯ ಕ್ಷೇತ್ರ ತಲಕಾವೇರಿಯಿಂದಲೂ ಕಸದ ರಾಶಿಯನ್ನು ಭಾಗಮಂಡಲ ಸರಕಾರಿ ಆಸ್ಪತ್ರೆ ಬಳಿಯ ಶವಾಗರದ ಹತ್ತಿರ ಹಾಕಲಾಗುತ್ತಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಕಸದ ರಾಶಿಯು ಗಬ್ಬು ನಾರುತ್ತಿದೆ. ಪಕ್ಕದಲ್ಲಿಯೇ ತಣ್ಣಿಮಾನಿಗಾಗಿ ತಲಕಾವೇರಿಗೆ ಹಾದು ಹೋಗಲು ರಸ್ತೆಯಿದ್ದು, ಇಲ್ಲಿ ಸುರಿದ ತ್ಯಾಜ್ಯಗಳು ಸದ್ದಿಲ್ಲದೆ ಕನ್ನಿಕೆಯನ್ನು ಸೇರಿ ಕಾವೇರಿಗೆ ನದಿಗೆ ಮಿಶ್ರಣವಾಗುತ್ತಿದೆ. ಈ ನಿಟ್ಟಿನಲ್ಲಿ ಗಮನ ಹರಿಸಿದ ಗ್ರಾ.ಪಂ. ಸದಸ್ಯರು ಕಸ ವಿಲೇವಾರಿ ಘಟಕ ನಿರ್ಮಾಣ ಆಗಲೇಬೇಕೆಂದು ತೀರ್ಮಾನಿಸಿ ಕರಿಕೆ ರಸ್ತೆಯ ತಣ್ಣಿಮಾನಿಯ
(ಮೊದಲ ಪುಟದಿಂದ) ಸರ್ವೆ ನಂ. 10/1ರಲ್ಲಿ 3 ಎಕರೆ ಜಾಗ ಗುರುತಿಸಿಕೊಂಡು 2 ಎಕರೆ ಕಸ ವಿಲೇವಾರಿಗೆ ಒಂದು ಎಕರೆ ಸ್ಮಶಾನಕ್ಕೆ ಕಂದಾಯ ಇಲಾಖೆಯಿಂದ ಸರ್ವೆ ಕಾರ್ಯವನ್ನು ಗ್ರಾ.ಪಂ. ಪೂರ್ಣ ಮಾಡಿಸಿಕೊಂಡಿತ್ತು. ತದನಂತರ ಘಟಕ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ ರೂ. 10 ಲಕ್ಷ ಮಂಜುರಾಗಿ 8 ತಿಂಗಳ ಹಿಂದೆಯೇ ಟೆಂಡರ್ ಕಾರ್ಯ ಮುಗಿಸಿ 4 ತಿಂಗಳ ಹಿಂದೆ ಭೂಮಿಪೂಜೆಯನ್ನು ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಹಾಗೂ ಗ್ರಾ.ಪಂ. ಸದಸ್ಯರು ಮತ್ತು ಊರಿನವರ ಸಮ್ಮುಖದಲ್ಲಿ ನೆರವೇರಿಸಲಾಗಿತ್ತು.
ಘಟಕ ನಿರ್ಮಾಣ ಕೆಲಸ ಆರಂಭಿಸುತ್ತಿದ್ದಂತೆ ಅರಣ್ಯ ಇಲಾಖೆ ಗ್ರಾ.ಪಂ.ಗೆ ಕೆಲಸ ಮಾಡದಂತೆ ನೋಟೀಸ್ ಜಾರಿ ಮಾಡಿತ್ತು. ನಂತರದ ದಿನಗಳಲ್ಲಿ ಎಂಎಲ್ಸಿ ಸುನಿಲ್ ಸುಬ್ರಮಣಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಗಮನಕ್ಕೆ ತರಲಾಯಿತು. ಭಾಗಮಂಡಲದಲ್ಲಿ ನಡೆದ ಸೂಕ್ಷ್ಮ ಪರಿಸರ ತಾಣದ ವಿರೋಧ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಜಯ ಗೊಂದಲವಿಲ್ಲದಂತೆ ಸಮಸ್ಯೆ ಬಗೆಹರಿಸುವಂತೆ ಹೇಳಿದರು. ಅರಣ್ಯ ಇಲಾಖೆ ಕೋರಂಗಾಲದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಸೂಚಿಸಿತ್ತು. ಆದರೆ ಸ್ಥಳೀಯವಾಗಿ ಶಾಲೆ ಹಾಗೂ ಜನನಿಬಿಡ ಪ್ರದೇಶವಾದುದರಿಂದ ಕೋರಂಗಾಲ ಗ್ರಾಮಸ್ಥರು ವಿಶೇಷ ಸಭೆ ನಡೆಸಿ ಕೋರಂಗಾಲದಲ್ಲಿ ಘಟಕ ನಿರ್ಮಾಣ ಮಾಡದಂತೆ ವಿರೋಧ ವ್ಯಕ್ತಪಡಿಸಿದರು.
ಮತ್ತೆ ಗ್ರಾ.ಪಂ.ಗೆ ಕಸ ವಿಲೇವಾರಿ ಸಮಸ್ಯೆ ಉದ್ಭವಿಸಿ ತಲೆನೋವಾಗಿದೆ. ಮುಂದಿನ ದಿನಗಳಲ್ಲಿ ತುಲಾ ಸಂಕ್ರಮಣ ಸಮೀಪಿಸುತ್ತಿದ್ದು, ಪ್ರವಾಸಿಗರು ಹಾಗೂ ಭಕ್ತಾದಿಗಳ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಇದರಿಂದಾಗಿ ಕಸದ ಸಮಸ್ಯೆಯೂ ಹೆಚ್ಚಾಗುತ್ತಿದೆ. ಕೂಡಲೇ ಗ್ರಾ.ಪಂ. ಕಸ ವಿಲೇವಾರಿ ಮಾಡಲು ಸೂಕ್ತ ಜಾಗ ಗುರುತಿಸಿಕೊಂಡು ಕಸ ವಿಲೇವಾರಿ ಘಟಕ ಸ್ಥಾಪಿಸುವಂತೆ ಗ್ರಾಮಸ್ಥರ ಆಗ್ರಹವಾಗಿದೆ.
ಈ ಬಗ್ಗೆ ಭಾಗಮಂಡಲ ವಲಯ ಅರಣ್ಯಾಧಿಕಾರಿ ಚಂಗಪ್ಪ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ತಣ್ಣಿಮಾನಿ ಗ್ರಾಮದ ಸರ್ವೆ ನಂ. 10/1 ರಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಿದಲ್ಲಿ ತಲಕಾವೇರಿ ವನ್ಯಧಾಮ ಡಿ-ಲೈನ್ ಪಕ್ಕದಲ್ಲಿಯೇ ಇರುವದರಿಂದ ವನ್ಯ ಪ್ರಾಣಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೆ ವನ್ಯಧಾಮ ಪರಿಸರ ಹಾಳಾಗುವ ಸಂಭವವಿದೆ. ವನ್ಯ ಪ್ರಾಣಿಗಳೂ ಕಸವನ್ನು ತಿನ್ನಲು ಬರುವ ಸಾಧ್ಯತೆಯಿದೆ. ಅರಣ್ಯದಂಚಿನ 1 ಕಿ.ಮೀ. ಅಂತರದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕಾಗುತ್ತದೆ. ಇದಕ್ಕೆ ವನ್ಯಜೀವಿ ಮಂಡಳಿಯ ಅನುಮತಿಯೂ ಅಗತ್ಯವಿದೆ. ಆದ್ದರಿಂದ ಮೇಲಾಧಿಕಾರಿಗಳ ಆದೇಶದ ಮೇರೆಗೆ ಇಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸದಂತೆ ನೋಟೀಸನ್ನು ಜಾರಿ ಮಾಡಲಾಗಿದೆ ಎಂದರು.
ಯಾವದೇ ಸಮಸ್ಯೆ ಇಲ್ಲ: ಸತೀಶ್ ಕುಮಾರ್
ಘಟಕ ನಿರ್ಮಾಣ ಸುತ್ತಲೂ ಕಾಂಪೌಂಡ್ ಬಳಸಿ ಮಾಡಲಾಗುತ್ತದೆ. ಕಸದಿಂದ ಗೊಬ್ಬರ ನಿರ್ಮಾಣವಾಗಿ ಹೊರ ಹೋಗುತ್ತದೆ. ಘಟಕ ನಿರ್ಮಾಣದಿಂದ ಯಾವದೇ ಪ್ರಾಣಿ, ಪಕ್ಷಿಗಳಿಗೆ ಅಥವಾ ಜನರಿಗೆ ತೊಂದರೆಯಾಗುವದಿಲ್ಲ. ಅರಣ್ಯ ಇಲಾಖೆ ತಡೆವೊಡ್ಡಿದ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಶಾಸಕರು ಗಮನ ಹರಿಸಬೇಕಾಗಿದೆ. ದಿನೇ ದಿನೇ ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸು ವದರಿಂದ ಜಿಲ್ಲಾಧಿಕಾರಿಗಳು ಗಮನ ಹರಿಸಿ ದೇವಾಲಯಕ್ಕೆ ಸಂಬಂಧಿಸಿದ ಜಾಗವನ್ನು ನೀಡಲು ಮುಂದಾಗ ಬೇಕಾಗಿದೆ ಎಂದು ಹೊಸೂರು ಸತೀಶ್ ಕುಮಾರ್ ಹೇಳಿದರು.
ತಣ್ಣಿಮಾನಿ ಗ್ರಾಮದ ಸರ್ವೆ ನಂ. 10/1ರಲ್ಲಿ ಸಾಕಷ್ಟು ಪೈಸಾರಿ ಜಾಗವಿದ್ದು, ತಾನು ಗ್ರಾ.ಪಂ. ಸದಸ್ಯನಾಗಿದ್ದ ಸಂದರ್ಭದಲ್ಲಿಯೇ ಕಸ ವಿಲೇವಾರಿ ಘಟಕಕ್ಕೆ ಸರ್ವೆ ಕಾರ್ಯ ಮಾಡಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾ.ಪಂ.ಗೆ ಆರ್ಟಿಸಿ ದೊರೆತಿಲ್ಲ. ಇದೀಗ ಅರಣ್ಯ ಇಲಾಖೆಯು ಸೂಕ್ಷ್ಮ ಪರಿಸರ ವಲಯ ಎಂದು ಹೇಳುತ್ತಿರುವದು ಸರಿಯಲ್ಲ. ಅರಣ್ಯ ಇಲಾಖೆಗೆ ಮಾನವನ ಪ್ರಾಣಕ್ಕಿಂತ ಪ್ರಾಣಿಗಳ ಪ್ರಾಣ ಮುಖ್ಯವಾಗಿದೆ ಎಂದು ಟೀಕಿಸಿದರು. ಮುಂದಿನ ದಿನಗಳಲ್ಲಿ ಮನುಷ್ಯನು ಜೀವಿಸಬೇಕೆಂಬದನ್ನು ಮನಗಂಡು ಗ್ರಾ.ಪಂ. ಗುರುತಿಸಿದ ಜಾಗದಲ್ಲಿಯೇ ಕಸ ವಿಲೇವಾರಿಗೆ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದರು.