ಮಡಿಕೇರಿ, ಸೆ. 23: ಮಡಿಕೇರಿ ನಗರ ಮತ್ತು ಗೋಣಿಕೊಪ್ಪದಲ್ಲಿ ನಡೆಯುವ ದಸರಾ ಸಂದರ್ಭ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ (5) ರಲ್ಲಿ ಪ್ರದತ್ತವಾದ ಅಧಿಕಾರದಂತೆ ವಾಹನ ಸುಗಮ ಸಂಚಾರಕ್ಕೆ ಕೆಲವು ಮಾರ್ಪಡುಗೊಳಿಸಿ ಆದೇಶ ಹೊರಡಿಸಲಾಗಿದೆ.

ಮಡಿಕೇರಿ ನಗರದಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧದ ವಿವರ:

ಜಿ.ಟಿ. ವೃತ್ತದಿಂದ ಕೆ.ಎಸ್.ಆರ್.ಟಿ.ಸಿ. ಡಿಪೋವರೆಗೆ ರಸ್ತೆಯ ಉಭಯ ಕಡೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ತಾ. 30 ರಂದು ಕುಂದುರುಮೊಟ್ಟೆ ದೇವಸ್ಥಾನದಿಂದ ಗಾಂಧೀ ಮಂಟಪ-ಎಂ.ಎಂ. ವೃತ್ತದವರೆಗೆ, ಜಿ.ಟಿ. ವೃತ್ತದಿಂದ ಖಾಸಗಿ ಬಸ್ ನಿಲ್ದಾಣ, ಇಂದಿರಾ ವೃತ್ತ, ಕಾಲೇಜು ರಸ್ತೆ, ಎಸ್.ಬಿ.ಐ. ಜಂಕ್ಷನ್, ಗಣಪತಿ ಬೀದಿ, ಮಹದೇವಪೇಟೆ, ಗದ್ದುಗೆ ಈ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.

ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ಮತ್ತು ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಜಿ.ಟಿ. ವೃತ್ತದ ಮುಖಾಂತರ ಎಲ್ಲಾ ವಾಹನಗಳಿಗೆ ಸಂಚಾರ ವ್ಯವಸ್ಥೆ ಎಂದಿನಂತಿರುತ್ತದೆ. ಜಿ.ಟಿ. ವೃತ್ತದ ಬಳಿ ಬರುವ ಎಲ್ಲಾ ಮಂಟಪಗಳು ಜಿ.ಟಿ. ವೃತ್ತದ ಬಳಿ ಇರುವ ಪೆಟ್ರೋಲ್ ಬಂಕ್ ಬಳಿಯಿಂದ ತಿರುಗಿ ಹೋಗುವದು. ತಾ. 30 ರಂದು ಸಂಜೆ 4 ಗಂಟೆಯ ನಂತರ ಮಡಿಕೇರಿ ನಗರದೊಳಗೆ ಜನಸಂದಣಿ ಅಧಿಕವಾಗುವದರಿಂದ ಹಾಗೂ ಎಲ್ಲಾ ರಸ್ತೆಗಳಲ್ಲಿ ಮಂಟಪಗಳು ಚಾಲನೆಯಲ್ಲಿರುವದರಿಂದ ಮತ್ತು ಮಂಟಪಗಳು ದೇವಸ್ಥಾನ ತಲುಪುವವರೆಗೆ ಎಲ್ಲಾ ವಾಹನಗಳಿಗೆ ನಗರದೊಳಗೆ ಪ್ರವೇಶ ನಿರ್ಭಂಧಿಸಲಾಗಿದೆ. ತಾ. 30 ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 1 ರ ಬೆಳಿಗ್ಗೆ 10 ಗಂಟೆಯವರೆಗೆ ಅಬ್ಬಿಫಾಲ್ಸ್ ಮತ್ತು ಗಾಲ್ಫ್ ಮೈದಾನಕ್ಕೆ ಪ್ರವಾಸಿಗರ ಭೇಟಿ ಹಾಗೂ ವಾಹನ ಸಂಚಾರವನ್ನು ನಿಷೇಧಿಸಿದೆ.

ಮಂಗಳೂರು ರಸ್ತೆಯ ದೊಡ್ಡ ತಿರುವಿನ ಕೆಳಗಡೆಗೆ ರಸ್ತೆಯ ಬದಿಗಳಲ್ಲಿ ಲಘು ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ದಸರಾ ಜನೋತ್ಸವ ಕಾರ್ಯಕ್ರಮದ ಸಂಬಂಧ ಮಡಿಕೇರಿ ನಗರದ ಮಹದೇವಪೇಟೆ ಮತ್ತು ಗಣಪತಿ ಬೀದಿ ನಿವಾಸಿಗಳು ತಾ. 30 ರ ಬೆಳಿಗ್ಗೆಯಿಂದ ಅಕ್ಟೋಬರ್ 1 ರಂದು ಸಂಜೆ 6 ಗಂಟೆಯವರೆಗೆ ತಮ್ಮ ವಾಹನಗಳನ್ನು ಮಹದೇವಪೇಟೆಯಲ್ಲಿರುವ ಎಲ್.ಜಿ. ಕ್ರಸೆಂಟ್ ಶಾಲೆಯ ಆವರಣ ಮತ್ತು ಕನಕದಾಸ ರಸ್ತೆಯ ನಗರ ಸಭೆ ಹಿಂದೂಸ್ತಾನಿ ಶಾಲೆಯ ಆವರಣದಲ್ಲಿ ನಿಲುಗಡೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 30 ರಂದು ಸಂಜೆ 4 ಗಂಟೆಯ ನಂತರ ವಾಹನಗಳಲ್ಲಿ ಮಡಿಕೇರಿ ನಗರಕ್ಕೆ ಆಗಮಿಸುವ ಸ್ಥಳೀಯ ನಾಗರಿಕರು ಹಾಗೂ ಹೋಂಸ್ಟೆ, ಲಾಡ್ಜ್ ಅಥವಾ ರೆಸಾರ್ಟ್‍ಗಳಲ್ಲಿ ಉಳಿದುಕೊಳ್ಳಲು ಆಗಮಿಸುವ ಪ್ರವಾಸಿಗರು ಸಂಪಿಗೆಕಟ್ಟೆ, ಗದ್ದುಗೆ, ಮುತ್ತಪ್ಪ ದೇವಸ್ಥಾನ ರಸ್ತೆ, ಕಾನ್ವೆಂಟ್ ಜಂಕ್ಷನ್, ಎಫ್.ಎಂ.ಸಿ. ಕಾಲೇಜು ಮಾರ್ಗವಾಗಿ ತೆರಳುವದು.

ತಾ. 30 ರಂದು ರಾತ್ರಿ ಮಡಿಕೇರಿ ನಗರದಲ್ಲಿ ದಸರಾ ಉತ್ಸವ ಆಚರಣೆ ಸಂಬಂಧ ಮಡಿಕೇರಿ ನಗರದೊಳಗೆ ಜನಸಂದಣಿ ಅಧಿಕವಾಗಲಿರುವದರಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.

ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಸಂಪಿಗೆ ಕಟ್ಟೆ ಕಡೆಯಿಂದ ಎ.ವಿ. ಸ್ಕೂಲ್, ಮುತ್ತಪ್ಪ ದೇವಸ್ಥಾನ, ಮುಂದೆ ಸೈಂಟ್ ಜೋಸೆಫ್ ಕಾನ್ವೆಂಟ್, ಎಸ್.ಪಿ ಆಫೀಸ್ ಜಂಕ್ಷನ್, ಮುಂದೆ ಐ.ಟಿ.ಐ. ಜಂಕ್ಷನ್ ಕಡೆಯಿಂದ ಎಫ್.ಎಂ.ಸಿ. ಕಾಲೇಜು ಮೈದಾನಕ್ಕೆ ಬಂದು ವಾಹನ ನಿಲುಗಡೆಗೊಳಿಸುವುದು. ಸಿದ್ದಾಪುರ, ಮೂರ್ನಾಡು ಮತ್ತು ಮಂಗಳೂರು ರಸ್ತೆ ಕಡೆಗಳಿಂದ ಬರುವ ವಾಹನಗಳಿಗೆ ಆರ್.ಎಂ.ಸಿ.ಯಾರ್ಡ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಗಾಳಿಬೀಡು, ಅಬ್ಬಿಪಾಲ್ಸ್, ಸೋಮವಾರಪೇಟೆ ಹಾಗೂ ಕಾಲೂರು ಕಡೆಗಳಿಂದ ಬರುವ ವಾಹನಗಳಿಗೆ ಎಫ್.ಎಂ.ಸಿ. ಕಾಲೇಜು ಮೈದಾನ ಮತ್ತು ಸೈಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಮೈಸೂರು, ಸಿದ್ದಾಪುರ, ಮಂಗಳೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೈಸೂರು ರಸ್ತೆಯ ಈಸ್ಟ್ ಎಂಡ್ ಹೊಟೇಲಿನ ಮುಂಭಾಗದಲ್ಲಿರುವ ಶಾಂತಿ ಚರ್ಚ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ವೀರಾಜಪೇಟೆ ಕಡೆಯಿಂದ ಬರುವ ವಾಹನ ನಿಲುಗಡೆಗೆ ಮೂರ್ನಾಡು ರಸ್ತೆಯ ಸರ್ಕಾರಿ ಆಸ್ಪತ್ರೆಯ ಪಂಪ್ ಹೌಸ್ ಬಳಿ ಚಿಕ್ಕ ಮೈದಾನದಲ್ಲಿ ಮತ್ತು ರಸ್ತೆಯ ಒಂದು ಬದಿಯಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ತಾ. 30 ರಂದು ರಾತ್ರಿ ಮಡಿಕೇರಿ ನಗರದಲ್ಲಿ ದಸರಾ ಉತ್ಸವ ಆಚರಣೆ ಸಂಬಂಧ ವಾಹನ ಸಂಚಾರದಲ್ಲಿ ಅಧಿಕವಾಗಿರುವದರಿಂದ ರಸ್ತೆಗಳಲ್ಲಿ ಏಕಮುಖ ವಾಹನ ಸಂಚಾರ ಮತ್ತು ವಾಹನ ಸಂಚಾರ, ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಏಕಮುಖ ವಾಹನ ಸಂಚಾರ: ಮೈಸೂರು, ಸೋಮವಾರಪೇಟೆ ಕಡೆಗಳಿಂದ ಬರುವ ವಾಹನಗಳು ಚೈನ್‍ಗೇಟಿನಿಂದ ಜೂನಿಯರ್ ಕಾಲೇಜು ಮೈದಾನಕ್ಕೆ ಪ್ರವೇಶಿಸುವ ದಾರಿಯು ತಾತ್ಕಾಲಿಕ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ನಿಲುಗಡೆ ಗೊಳಿಸಿದ ವಾಹನಗಳು ವಾಪಾಸು ಮೈಸೂರು ರಸ್ತೆ ಕಡೆ ತೆರಳುವಾಗ ಗೌಡ ಸಮಾಜ, ರಾಘವೇಂದ್ರ ದೇವಸ್ಥಾನ ಕಡೆಯಿಂದ ಚೈನ್‍ಗೇಟಿಗಾಗಿ ತೆರಳುವಂತೆಯು ಏಕಮುಖ ಸಂಚಾರ ರಸ್ತೆಯಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ತಾ. 30 ರಂದು ರಾತ್ರಿ ಮಡಿಕೇರಿ ನಗರದಲ್ಲಿ ದಸರಾ ಉತ್ಸವ ಆಚರಣೆ ಸಂಬಂಧ ಈ ಕೆಳಕಂಡ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ವಾಹನ ನಿಲುಗಡೆ ಸ್ಥಳದ ವಿವರ ಇಂತಿದೆ: ಎಫ್.ಎಂ.ಸಿ. ಕಾಲೇಜು ಮೈದಾನ, ಸೈಂಟ್ ಜೋಸೆಫ್ ಕಾನ್ವೆಂಟ್ ಮೈದಾನ, ಆರ್.ಎಂ.ಸಿ. ಯಾರ್ಡ್ ಮೈದಾನ., ಕ್ರೆಸೆಂಟ್ ಶಾಲಾ ಮೈದಾನ, ಹಿಂದುಸ್ಥಾನಿ ಶಾಲಾ ಮೈದಾನ, ಐ.ಟಿ.ಐ ಕಾಲೇಜಿನ ಮೈದಾನ, ಶಾಂತಿ ಚರ್ಚ್ ಮೈದಾನ (ದ್ವಿಚಕ್ರ ಮೋಟಾರು ಸೈಕಲ್ ಮಾತ್ರ), ಮ್ಯಾನ್ಸ್ ಕಾಂಪೌಂಡ್ (ಜನರಲ್ ತಿಮ್ಮಯ್ಯ ಜಿಲ್ಲಾ ಕೀಡ್ರಾಂಗಣ), ಜೂನಿಯರ್ ಕಾಲೇಜು ಮೈದಾನ, ಮಂಗಳೂರು ರಸ್ತೆ ದೊಡ್ಡ ತಿರುವು, ಮೂರ್ನಾಡು ರಸ್ತೆ, ಪಂಪ್ ಹೌಸ್ ಬಳಿ ಅನುಕೂಲತೆ ಮಾಡಲಾಗಿದೆ.

ಗೋಣಿಕೊಪ್ಪ ವಾಹನ ಸಂಚಾರ-ನಿಲುಗಡೆ

ವೀರಾಜಪೇಟೆ ಕಡೆಯಿಂದ ಬರುವ ವಾಹನಗಳನ್ನು ಮೈಸೂರು ಕಡೆಗೆ ಹೋಗಲು ಕೈಕೇರಿ ಕಳತ್ಮಾಡ್ ಜಂಕ್ಷನ್‍ನಿಂದ ಅತ್ತೂರು ಜಂಕ್ಷನ್‍ಗಾಗಿ ಪಾಲಿಬೆಟ್ಟ ರಸ್ತೆಗೆ ಬಂದು ಮೈಸೂರು ರಸ್ತೆಗೆ ಸೇರಿ ಹೋಗುವದು. ಮೈಸೂರು ಕಡೆಯಿಂದ ಬರುವ ವಾಹನಗಳನ್ನು ವೀರಾಜಪೇಟೆ ಕಡೆಗೆ ಹೋಗಲು ತಿತಿಮತಿಯಿಂದ ಪಾಲಿಬೆಟ್ಟ ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆಗೆ ಹೋಗುವದು.

ಪೊನ್ನಂಪೇಟೆ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಪೊನ್ನಂಪೇಟೆಯಿಂದ ಪೊನ್ನಪ್ಪಸಂತೆ, ಕೋಣನಕಟ್ಟೆ, ತಿತಿಮತಿ ಮಾರ್ಗವಾಗಿ ಹೋಗುವದು. ಅದೇ ರೀತಿ ಮೈಸೂರಿನಿಂದ ಪೊನ್ನಂಪೇಟೆ, ಶ್ರೀಮಂಗಲ ಕಡೆ ಹೋಗುವ ವಾಹನಗಳು ತಿತಿಮತಿ, ಕೋಣನಕಟ್ಟೆ, ಪೊನ್ನಪ್ಪಸಂತೆ ಮಾರ್ಗವಾಗಿ ಹೋಗುವದು. ವೀರಾಜಪೇಟೆಯಿಂದ ಪೊನ್ನಂಪೇಟೆ ಶೀಮಂಗಲ ಕಡೆಗೆ ಹೋಗುವ ವಾಹನಗಳು ಹಾತೂರು ಜಂಕ್ಷನ್‍ನಿಂದ ಕುಂದಾ ಮಾರ್ಗವಾಗಿ ಪೊನ್ನಂಪೇಟೆ ಕಡೆಗೆ ಹೋಗುವದು. ಪೊನ್ನಂಪೇಟೆ ಕಡೆಯಿಂದ ವೀರಾಜಪೇಟೆಗೆ ಹೋಗುವ ವಾಹನಗಳು ಕುಂದಾ ಹಾತೂರು ಮಾರ್ಗವಾಗಿ ಹೋಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿಯಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.