ವೀರಾಜಪೇಟೆ, ಸೆ. 23: ನಮ್ಮ ಮೇಲೆ ನಮಗೆ ವಿಶ್ವಾಸ ಮತ್ತು ನಂಬಿಕೆ ಇದ್ದಲ್ಲಿ ಮಾತ್ರ ತಮಗೆ ವಹಿಸಿದ ಕೆಲಸ ಮತ್ತು ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಕೌಸುಬ ಸಭಾಂಗಣದಲ್ಲಿ ಸರಣಿ ಮಾಧ್ಯಮ ಸಂವಾದ ಕಾರ್ಯಕ್ರಮದಡಿ ಶನಿವಾರ ಆತ್ಮ ವಿಶ್ವಾಸ ಮತ್ತು ಸಾಮಥ್ರ್ಯ ವೃದ್ಧಿ ವಿಷಯದ ಕುರಿತು ಉಪನ್ಯಾಸ ನೀಡಿದರು. ನಾವು ಮಾಡುವ ಕಾರ್ಯ ನಮಗೆ ಹೊರೆಯಾಗಬಾರದು. ಮತ್ತೆ ಮತ್ತೆ ಅದರಲ್ಲಿಯೇ ತೊಡಗಿಸಿಕೊಳ್ಳುವಂತಹ ಆಸಕ್ತಿ ಹೊಂದಿರಬೇಕೆಂದರು.

ಅಡಿಪಾಯ ಮುಖ್ಯವಾಗಿದ್ದು, ಭಯವೇ ನಮ್ಮ ಮೊದಲ ಶತ್ರು. ನನಗೆ ಆರ್ಥವಾಗುವದಿಲ್ಲ ಎನ್ನುವ ಆತಂಕ ದೂರ ಮಾಡಬೇಕು. ನಾನು ಇತರರಿಗಿಂತ ಕಡಿಮೆ ಬುದ್ಧಿವಂತ, ಒಮ್ಮೆ ಓದು ಮುಗಿದರೆ ಸಾಕು, ನನಗೆ ಉದ್ಯೋಗ ಸಿಗುವದಿಲ್ಲ, ಮುಂದೇನು ಎಂಬ ಭಯ ಬಿಡಬೇಕು. ಇಷ್ಟವಾದುದನ್ನು ಮೊದಲು ಓದಬೇಕು. ಸಾಧನೆ ಮಾಡಬಲ್ಲೆ ಎಂಬ ಛಲ ಹೊಂದಿರಬೇಕೆಂದರು.

ನಮ್ಮ ಬದುಕು ನಮ್ಮ ಕೈಯಲ್ಲಿರುತ್ತದೆ. ಹಿಂಜರಿಕೆ ಎಂಬವದು ನಮ್ಮನ್ನು ಕೊಲ್ಲುತ್ತದೆ. ನನಗೆ ಆಗುವದಿಲ್ಲ ಎಂಬುವದನ್ನು ಮೊದಲು ಬಿಡಬೇಕೆಂದು ಕರೆ ನೀಡಿದರು.

ಸಂವಾದದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಗಗನ್, ಎ.ಎನ್. ದೀಕ್ಷಿತ್, ಶಿಲ್ಪ ಲೋಬೋ, ವಿಶ್ಮಿತಾ, ತೇಜಾ, ಅಂಜನಾ ಪಾಲ್ಗೊಂಡಿದ್ದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಐನಂಡ ಸೋಮಣ್ಣ ಇದ್ದರು.