ಕುಶಾಲನಗರ, ಸುಂಟಿಕೊಪ್ಪ, ಸೆ. 23: ಕೌರವರು ಹೆಚ್ಚು ಮಂದಿಯಿದ್ದರು. ಆದರೆ ಗೆದ್ದಿದ್ದು ಪಾಂಡವರು. ಪಾಂಡವರಿಗೆ ಧರ್ಮದ ರಕ್ಷಣೆ ಹಾಗೂ ಶ್ರೀ ಕೃಷ್ಣನ ದಯೆಯಿದ್ದಂತೆ ನಮಗೂ ಶ್ರೀ ಕೃಷ್ಣನ ದಯೆಯಿದೆ . ಧರ್ಮ ಯುದ್ಧದಲ್ಲಿ ಗೆಲ್ಲುತ್ತೇವೆ. ಸತ್ಯ ಗೆಲ್ಲುತ್ತದೆ. ನಾವು ಸತ್ಯದ ಪರವಾಗಿದ್ದೇವೆ
ಪಕ್ಷ ಉಳಿಸುವದೇ ನಮ್ಮ ಉದ್ದೇಶ ಎಂದು ಟಿಟಿವಿ ದಿನಕರನ್ ಹೇಳಿದರು. ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ತೊಂಡೂರುವಿನ ಪಾಡಿಂಗ್ಟನ್ ರೆಸಾರ್ಟಿನ ಸನಿಹ ಶನಿವಾರ ತಮಿಳುನಾಡುವಿನ ಏಐಡಿಎಂಕೆ ಯಿಂದ ಉಚ್ಚಾಟಿತಗೊಂಡ 18 ಶಾಸಕರು ಸೇರಿದ್ದು ದಿನಕರನ್ ಎಲ್ಲರ ಪರÀವಾಗಿ ಸುದ್ಧಿಗಾರರೊಂದಿಗೆ ಮಾತನಾಡುತ್ತಿದ್ದರು. ಕಳೆದ 15 ದಿನಗಳಿಂದ ಪಾಡಿಂಗ್ಟನ್ ರೆಸಾರ್ಟಿನಲ್ಲಿ 17 ಶಾಸಕರು ತಂಗಿದ್ದು ನಿನ್ನೆ ದಿನ ದಿನಕರನ್ ಇಲ್ಲಿಗೆ ಆಗಮಿಸಿದ್ದರು.
ಪಕ್ಷ ದ್ರೋಹ ಮಾಡಿದವರಿಗೆ ಜನ, ಕಾರ್ಯಕರ್ತರು ಬುದ್ದಿ ಕಲಿಸುತ್ತಾರೆ. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪಕ್ಷಕ್ಕೆ, ಅಮ್ಮನಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
18 ಶಾಸಕರನ್ನು ಅನರ್ಹಗೊಳಿಸಿ ರುವದು ಸಂವಿಧಾನ ವಿರುದ್ಧವಾದದ್ದು. ಅವರು ಪಕ್ಷದ ಇತರ ಶಾಸಕರನ್ನು ಹೆದರಿಸಿ ತಮ್ಮೊಂದಿಗಿರಿಸಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರು ನಮ್ಮೊಂದಿಗಿದ್ದಾರೆ. ಕಾನೂನು ಹೋರಾಟದಲ್ಲಿ ನಮಗೆ ಗೆಲುವು ನಿಶ್ಚಿತ. ಅಂತೂ ಈಗಿನ ಸರಕಾರವನ್ನು ಉರುಳಿಸುತ್ತೇವೆ. ಚುನಾವಣೆಯಲ್ಲಿ ಜನರ ಮುಂದೆ ತೆರಳುತ್ತೇವೆ ಎಂದು ಘೋಷಿಸಿದರು. ಅಮ್ಮಾ ಅವರ ಆದರ್ಶಗಳನ್ನು ಪಾಲಿಸುವ ನಾವು ಒಗ್ಗಟ್ಟಾಗಿದ್ದೇವೆ. ನಮ್ಮೊಂದಿಗಿರುವ ಶಾಸಕರು ಹೋರಾಟಗಾರರು. ಇವರ್ಯಾರಿಗೂ ಪದವಿ, ಅಧಿಕಾರದ ಆಸೆಯಿಲ್ಲ.ಅಮ್ಮಾ ಸಾವಿನ ವಿಚಾರದಲ್ಲಿ ಯಾವದೇ ತನಿಖೆಗೆ ಸಿದ್ಧ ಎಂದು ದಿನಕರನ್ ಸವಾಲು ಹಾಕಿದರು.
ತಾನು ಭಾನುವಾರ ತಮಿಳುನಾಡುವಿಗೆ ಹಿಂತಿರುಗಲಿದ್ದು ಇತರ 17 ಶಾಸಕರು ಇನ್ನೂ ಹಲವು ದಿನ ಕೊಡಗಿನಲ್ಲಿಯೇ ಇರುತ್ತಾರೆ. ಮುಂದಿನ ಬೆಳವಣಿಗೆ ನೋಡಿಕೊಂಡು ಶಶಿಕಲಾ ಅವರನ್ನು ಇನ್ನು 15 ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಭೇಟಿ ಮಾಡುವದಾಗಿ ತಿಳಿಸಿದರು.