ಸೋಮವಾರಪೇಟೆ, ಸೆ.23: ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಚಾಲನೆ ನೀಡಿದರು. ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಸನಿಹವಿರುವ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮನೆ ಮನೆಗೆ ಕಾಂಗ್ರೆಸ್ ಎಂಬ ಘೋಷವಾಕ್ಯದೊಂದಿಗೆ ಪಕ್ಷದ ಮುಖಂಡರ ಭಾವಚಿತ್ರ ಇರುವ ಸ್ಟಿಕ್ಕರ್ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಹೊಂದಿರುವ ಕಿರುಹೊತ್ತಿಗೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸೇರಿದಂತೆ ಪಕ್ಷದ ಮುಖಂಡರು ಚಾಲನೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಂಎಲ್‍ಸಿ ವೀಣಾ ಅಚ್ಚಯ್ಯ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಪ್ರತಿ ಮನೆಗೆ ಮುಟ್ಟಿಸುವ ಕಾರ್ಯ ಆಗಬೇಕಿದ್ದು, ಈ ಹಿನ್ನೆಲೆ ಪಕ್ಷದ ವರಿಷ್ಠರ ಸೂಚನೆಯಂತೆ ಅಭಿಯಾನ ಕೈಗೊಳ್ಳಲಾಗಿದೆ. ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ನಿರಂತರವಾಗಿರಲಿದ್ದು, ಪಕ್ಷದ ವಿವಿಧ ಮುಖಂಡರು, ಜನಪ್ರತಿನಿಧಿಗಳೂ ಸೇರಿದಂತೆ ಕಾರ್ಯಕರ್ತರು ಇದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಕಾರ್ಯಕರ್ತರು ಪಕ್ಷವನ್ನು ಇನ್ನಷ್ಟು ಸಂಘಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪಕ್ಷವು ಹಲವಷ್ಟು ಕಾರ್ಯ ಕ್ರಮಗಳನ್ನು ಜಾರಿಗೊಳಿಸುತ್ತಿವೆ. ಅಭಿವೃದ್ಧಿಯ ಆಧಾರದ ಮೇಲೆ ಈ ಬಾರಿಯ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ. ಜನತೆಯ ಆಶೀರ್ವಾದವೂ ಕಾಂಗ್ರೆಸ್ ಮೇಲಿದೆ ಎಂದು ಅಭಿಪ್ರಾಯಿಸಿದರು.

ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾರ್ಯದರ್ಶಿ ಲಾರೆನ್ಸ್, ಯುವ ಘಟಕದ ಅಧ್ಯಕ್ಷ ಚೇತನ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಪ್ರಮುಖ ಚಂದ್ರಮೌಳಿ, ಮಡಿಕೇರಿ ತಾ.ಪಂ. ಸದಸ್ಯ ಅಪ್ರು ರವೀಂದ್ರ, ಸೋಮವಾರಪೇಟೆ ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಮಹಿಳಾ ಕಾಂಗ್ರೆಸ್‍ನ ಪುಷ್ಪಲತಾ, ಶೀಲಾ ಡಿಸೋಜ, ಪ್ರಮುಖರಾದ ಔರಂಗಜೇಬ್, ಕೆ.ಎ. ಆದಂ, ಶರತ್‍ಶೇಖರ್, ಅಬ್ಬಾಸ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಕೆ.ಈ. ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.