ಮಡಿಕೇರಿ, ಸೆ. 23: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಗ್ರಾಮ ಲೆಕ್ಕಾಧಿಕಾರಿಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ನೇತೃತ್ವದಲ್ಲಿ ಇಂದು ಒಂದು ದಿನದ ಸಾಂದರ್ಭಿಕ ರಜೆ ಹಾಕಿದ ಲೆಕ್ಕಾಧಿಕಾರಿಗಳು ಜಿಲ್ಲಾಡಳಿತ ಭವನ ದೆದುರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.ಜಾಬ್ ಚಾರ್ಟನ್ನು ಜಾರಿ ಗೊಳಿಸುವದು, ಗ್ರಾಮ ಲೆಕ್ಕಾಧಿಕಾರಿಗಳ ಪದೋನ್ನತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವದು, ಅನ್ಯ ಇಲಾಖೆಯ ಕೆಲಸ ಕಾರ್ಯಗಳನ್ನು ವಹಿಸದೇ ಇರುವದು, ತಾಂತ್ರಿಕ ಕೆಲಸ ಕಾರ್ಯಗಳ ಮತ್ತು ತಂತ್ರಾಂಶಗಳ ನಿರ್ವಹಣೆಯ ಹೊರೆಯನ್ನು ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಹೇರದಿರುವದು, ಸಕಾಲ ಬ್ಯಾಂಕಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸುವದು, ರಜೆಯ ದಿನಗಳಲ್ಲಿ
(ಮೊದಲ ಪುಟದಿಂದ) ಕೆಲಸದ ಒತ್ತಡ ಹೇರುತ್ತಿರುವದನ್ನು ನಿಲ್ಲಿಸುವದು, ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಮಾಡುವ ವ್ಯಕ್ತಿಗಳ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವದು, ವೇತನ ಭತ್ಯೆಯನ್ನು ಪರಿಷ್ಕರಿಸುವದು, ತಹಶೀಲ್ದಾರರ, ಸಹಾಯಕ ಕಮಿಷನರ್, ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕಗೊಂಡ ಗ್ರಾಮಕ್ಕೆ ಕರ್ತವ್ಯಕ್ಕೆ ನಿಯೋಜಿಸುವದು, ಮೊಬೈಲ್ ಆ್ಯಪ್ ಮೂಲಕ ಬೆಳೆ ನಮೂದು ಮಾಡುವ ತಂತ್ರಾಂಶದ ಕೆಲಸದಿಂದ ಗ್ರಾಮಲೆಕ್ಕಾಧಿಕಾರಿಗಳನ್ನು ವಿಮುಕ್ತಿಗೊಳಿಸುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಪದಾಧಿಕಾರಿಗಳಾದ ಹರೀಶ್ ವೀರಾಜಪೇಟೆ, ರಮೇಶ್ ಮಡಿಕೇರಿ, ಅನಿಲ್ ಕುಮಾರ್, ಹೇಮಂತ್ ಕುಮಾರ್ ಹಾಗೂ ಇನ್ನಿತರರು ಇದ್ದರು.