ಶನಿವಾರಸಂತೆ, ಸೆ. 23: ಮದುವೆ ನಿಶ್ಚಯದ ದಿನ ಉಂಗುರ ಬದಲಾಯಿಸಿಕೊಂಡು ಗಣಕೂಟ ಹೊಂದಾಣಿಕೆಯಾಗಲಿಲ್ಲ ಎಂಬ ಕಾರಣಕ್ಕೆ ಮದುವೆ ರದ್ದುಗೊಂಡ ಘಟನೆ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಇತ್ಯರ್ಥಗೊಂಡಿದೆ.
ಇತ್ತೀಚೆಗೆ ಕುಶಾಲನಗರದ ಗಂಡು, ಕೊಡ್ಲಿಪೇಟೆ ವ್ಯಾಪ್ತಿಯ ಕಿರಿಕೊಡ್ಲಿ ಗ್ರಾಮದ ಹೆಣ್ಣಿನ ಕಡೆಯವರು ಮಾತುಕತೆ ನಡೆಸಿ ಹೆಣ್ಣಿನ ಮನೆಯಲ್ಲಿ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು.
ಮದುವೆಗೆ ಸ್ವಲ್ಪ ದಿನವಿರುವಾಗ ಗಂಡಿನ ಕಡೆಯವರು ಗಂಡು - ಹೆಣ್ಣಿನ ಗಣಕೂಟ ಹೊಂದಾಣಿಕೆಯಾಗುತ್ತಿಲ್ಲವೆಂದು ತಗಾದೆ ತೆಗೆದರು. ಇದರಿಂದ ಹೆಣ್ಣಿನ ಕಡೆಯವರು ಅಸಮಾಧಾನಗೊಂಡು ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಅಲ್ಲಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ನಿಶ್ಚಿತಾರ್ಥದ ಉಂಗುರಗಳನ್ನು ಹಿಂಪಡೆದುಕೊಂಡು, ನಿಶ್ಚಿತಾರ್ಥಕ್ಕೆ ಹೆಣ್ಣಿನ ಕಡೆಯವರು ಖರ್ಚು ಮಾಡಿದ್ದ 50,000 ರೂ.ಗಳನ್ನು ಗಂಡಿನ ಕಡೆಯವರು ನೀಡಿ, ಈ ಬಗ್ಗೆ ಲಿಖಿತ ಹೇಳಿಕೆ ಬರೆದುಕೊಟ್ಟು, ಠಾಣೆಯಿಂದ ತೆರಳಿದರು.
-ನರೇಶ್.