ಸೋಮವಾರಪೇಟೆ, ಸೆ.24: ಕಳೆದ ತಾ. 10ರಂದು ನಾಪತ್ತೆಯಾಗಿದ್ದ ತಾಲೂಕಿನ ಆಲೂರು ಸಮೀಪದ ಹೊಸಗುತ್ತಿ ಗ್ರಾಮದ ಯುವಕ ನೆರೆಯ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕರಡಿ ಲಕ್ಕನಕೆರೆ ಏತ ನೀರಾವರಿಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ನಾಲ್ಕೈದು ದಿನಗಳ ಹಿಂದೆಯೇ ಸಾವನ್ನಪ್ಪಿರುವ ಸಂಶಯ ವ್ಯಕ್ತವಾಗಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.
ತಾಲೂಕಿನ ಹೊಸಗುತ್ತಿ ಗ್ರಾಮದ ಮುತ್ತಪ್ಪ ಎಂಬವರ ಪುತ್ರ, ಕೂಡಿಗೆಯ ಕಾಫಿ ಕ್ಯೂರಿಂಗ್ ವಕ್ರ್ಸ್ನಲ್ಲಿ ಸೂಪರ್ವೈಸರ್ ಆಗಿದ್ದ ಕೆ.ಎಂ. ಚೇತನ್ (23) ಎಂಬಾತ ಕಳೆದ ತಾ. 10ರಂದು ನಾಪತ್ತೆಯಾಗಿದ್ದ. ಈ ಬಗ್ಗೆ ಯುವಕನ ತಂದೆ ಮುತ್ತಪ್ಪ ಅವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಾ. 14ರಂದು ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮಹೇಶ್ ಅವರು ಯುವಕನ ಮೊಬೈಲ್ ಕರೆಗಳ ಜಾಡು ಹಿಡಿದು ಪರಿಶೀಲಿಸಿದಾಗ ಕೊನೆಯ ಕರೆ ಹೆಗ್ಗಡಹಳ್ಳಿ ಗ್ರಾಮದ ಯುವತಿಯೋರ್ವಳೊಂದಿಗೆ ಮಾತನಾಡಿದ್ದುದು ತಿಳಿದುಬಂದಿತ್ತು. ಸ್ಥಳ ಪರಿಶೀಲಿಸಿದ ಸಂದರ್ಭ ಹೆಗ್ಗಡಹಳ್ಳಿಯಲ್ಲಿ ಯುವಕನ ಬೈಕ್ ಮಾತ್ರ ಪತ್ತೆಯಾಗಿತ್ತು. ಇದರೊಂದಿಗೆ ಯುವತಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ಯಾವದೇ ಮಹತ್ತರ ಮಾಹಿತಿಗಳು ಲಭ್ಯವಾಗಿರಲಿಲ್ಲ.
ಈ ಮಧ್ಯೆ ನೆರೆಯ ಪಿರಿಯಾಪಟ್ಟಣ ತಾಲೂಕಿನ ಚನ್ನಕೇಶವಪುರದ ಭೋವಿ ಕಾಲೋನಿ ಬಳಿ ಇರುವ ಕರಡಿ ಲಕ್ಕನಕೆರೆಯಲ್ಲಿ ಕಾಣೆಯಾಗಿದ್ದ ಚೇತನ್ನ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ರೈತರು ತಮ್ಮ ಜಮೀನಿನ ಬಳಿ ತೆರಳುತ್ತಿದ್ದ ಸಂದರ್ಭ ಮೃತದೇಹ ಕಂಡುಬಂದಿದ್ದು, ತಕ್ಷಣ ಬೆಟ್ಟದಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸಮಕ್ಷಮ ಮೃತದೇಹವನ್ನು ಹೊರಗೆತ್ತಿ ಪರಿಶೀಲಿಸಿದ ಸಂದರ್ಭ, ಹೊಸಗುತ್ತಿಯಿಂದ ಕಾಣೆಯಾದ ಚೇತನ್ನ ಮೃತದೇಹ ಎಂಬದು ದೃಢಪಟ್ಟಿದೆ.
ಈ ಬಗ್ಗೆ ಮೃತ ಯುವಕನ ಪೋಷಕ ರಿಗೆ ಮಾಹಿತಿ ರವಾನಿಸಿದ್ದು, ಕುಟುಂಬಸ್ಥರೂ ಸಹ ತೆರಳಿ ಪರಿಶೀಲಿಸಿ ದ್ದಾರೆ. ನಂತರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತನ ಸಹೋದರ ಮಣಿಕಂಠ ಅವರು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲಿನ ಪೊಲೀಸರು ಕುಶಾಲನಗರ ಠಾಣಾಧಿಕಾರಿ ಮಹೇಶ್ ಅವರೊಂದಿಗೆ ಮಾಹಿತಿಗಳನ್ನು ಪಡೆದುಕೊಂಡಿದ್ದು, ಬೆಟ್ಟದಪುರ ಠಾಣಾಧಿಕಾರಿ ಚಿಕ್ಕಸ್ವಾಮಿ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಬೆಟ್ಟದಪುರ ಪೊಲೀಸ್ ಠಾಣಾಧಿಕಾರಿ ಚಿಕ್ಕಸ್ವಾಮಿ ಅವರು ‘ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ಮೃತನ ಸಹೋದರ ದೂರು ನೀಡಿದ್ದು, ತನಿಖೆ ಕೈಗೊಳ್ಳಲಾಗಿದೆ. ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ ಘಟನಾವಳಿಗಳ ಮಾಹಿತಿ ಕಲೆಹಾಕುತ್ತಿದ್ದೇವೆ. ತಲೆ ಭಾಗಕ್ಕೆ ಗಾಯಗಳಾಗಿವೆಯೇ? ಎಂಬ ಬಗ್ಗೆ ಪ್ರಾಥಮಿಕ ಪರಿಶೀಲನೆ ನಡೆಸಲಾಗಿದ್ದು, ಆ ಬಗ್ಗೆ ಯಾವದೇ ಕುರುಹುಗಳು ಕಂಡುಬಂದಿಲ್ಲ. ಮೃತದೇಹದ ಕೆಲಭಾಗಗಳನ್ನು ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸ ಲಾಗುವದು. ಮರಣೋತ್ತರ ಪರೀಕ್ಷೆಯ ಸಂಪೂರ್ಣ ವಿವರ ಲಭ್ಯವಾದ ಬಳಿಕವಷ್ಟೇ ತನಿಖೆಯ ಸ್ಪಷ್ಟ ಚಿತ್ರಣ ದೊರೆಯಲಿದೆ. ಈ ಬಗ್ಗೆ ಕುಶಾಲನಗರ ಠಾಣೆಯಿಂದಲೂ ಮಾಹಿತಿ ಪಡೆಯ ಲಾಗಿದೆ’ ಎಂದರು.
ಸಾವಿನ ಸುತ್ತ ಅನುಮಾನದ ಹುತ್ತ: ಕೂಡಿಗೆಯ ಕಾಫಿ ಕ್ಯೂರಿಂಗ್ ವಕ್ರ್ಸ್ನಲ್ಲಿ ಸೂಪರ್ವೈಸರ್ ಆಗಿದ್ದ ಚೇತನ್, ಸಾವನ್ನಪ್ಪಿರುವ ಘಟನೆಯ ಸುತ್ತ ಹಲವು ಅನುಮಾನಗಳು ಮೂಡುತ್ತಿವೆ. ಸ್ಥಳೀಯರ ಪ್ರಕಾರ ಕಳೆದ ತಾ. 10ರಂದು ಹೆಗ್ಗಡಹಳ್ಳಿಯಲ್ಲಿದ್ದ ಚೇತನ್ ನಂತರ ಕಂಡುಬಂದಿಲ್ಲ. ಯುವತಿಯ ಮನೆಗೆ ತೆರಳಿದ್ದ ಸಂದರ್ಭ ಗಲಾಟೆಯೂ ನಡೆದಿದೆ ಎನ್ನಲಾಗಿದ್ದು, ಅಲ್ಲಿಂದ ಬೈಕ್ ಬಿಟ್ಟು ತೆರಳಿದವ ನಂತರ ಶವವಾಗಿ ಪತ್ತೆಯಾಗಿದ್ದಾನೆ. ಇದರೊಂದಿಗೆ ತಾ. 10ಕ್ಕೆ ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಹೆಗ್ಗಡಹಳ್ಳಿಯಿಂದ ಬೆಟ್ಟದಪುರದವರೆಗೆ ಚೇತನ್ ತೆರಳಿದ್ದಾದರೂ ಹೇಗೆ? ಎಂಬ ಪ್ರಶ್ನೆ ಮೂಡಿದೆ.
ಹೆಗ್ಗಡಹಳ್ಳಿಯಿಂದ ತಾ. 10ಕ್ಕೆ ಕಾಣೆಯಾದ ಚೇತನ್ನ ಮೃತದೇಹ ಮೊನ್ನೆ ಕಂಡುಬಂದಿದೆ. ನಾಪತ್ತೆಯಾದ ದಿನದಿಂದ 11 ದಿನಗಳ ಕಾಲ ಎಲ್ಲಿದ್ದ? ಒಂದು ವೇಳೆ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾದನೇ? ಅಥವಾ ಯಾರಾದರೂ ಚೇತನ್ನನ್ನು ಹತ್ಯೆಗೈದು ಕೆರೆಗೆ ಹಾಕಿದರೇ? ಎಷ್ಟು ದಿನಗಳ ಹಿಂದೆ ಮೃತಪಟ್ಟಿರಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪೊಲೀಸರ ತನಿಖೆಯ ನಂತರವಷ್ಟೇ ಉತ್ತರ ಸಿಗಲಿದೆ.
- ವಿಜಯ್