ಮೂರ್ನಾಡು, ಸೆ. 24: ಪದವಿಪೂರ್ವ ಶಿಕ್ಷಣ ಇಲಾಖೆ, ಮೂರ್ನಾಡು ವಿದ್ಯಾಸಂಸ್ಥೆ ಮತ್ತು ಮೂರ್ನಾಡು ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ನಡೆಯಿತು.

ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕ್ರೀಡಾಕೂಟವನ್ನು ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಯಿಂದ ದೈಹಿಕ, ಮಾನಸಿಕವಾಗಿ ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವದು ಮುಖ್ಯ ಎಂದು ತಿಳಿಸಿದರು.

ಮೂರ್ನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆ ನಿರ್ದೇಶಕ ಬಡುವಂಡ ಸುಬ್ರಮಣಿ, ಖಜಾಂಚಿ ಪುದಿಯೊಕ್ಕಡ ಸುಬ್ರಮಣಿ, ಜನರಲ್ ತಿಮ್ಮಯ್ಯ ಕ್ರೀಡಾ ಅಕಾಡೆಮಿ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪೋ. ಭಾಗೀರತಿ, ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಪ್ರಕಾಶ್, ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ ಉಪಸ್ಥಿತರಿದ್ದರು. ಮೂರ್ನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷ ಪಳಂಗಂಡ ಎಸ್. ಮುದ್ದಪ್ಪ ಧ್ವಜಾರೋಹಣಗೈದರು. ಕ್ರೀಡಾಕೂಟಕ್ಕೆ ಆಗಮಿಸಿದ 14 ಕಾಲೇಜುಗಳ ಕ್ರೀಡಾಪಟುಗಳು ಪಧಸಂಚಲನೆ ನಡೆಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಸಮಾರೋಪ: ಕ್ರೀಡಾಕೂಟದ ಸಮಾರೋಪ ಸಮಾರಂಭ ಮೂರ್ನಾಡು ವಿದ್ಯಾಸಂಸ್ಥೆ ಖಜಾಂಚಿ ಪುದಿಯೊಕ್ಕಡ ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆಯಿತು. ಜನರಲ್ ತಿಮ್ಮಯ್ಯ ಕ್ರೀಡಾ ಅಕಾಡೆಮಿ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಸಮಾರೋಪ ಭಾಷಣ ಮಾಡಿದರು. ನಿವೃತ್ತ ದೈಹಿಕ ಶಿಕ್ಷಕ ಬಿ.ಡಿ. ನಾಗರಾಜ್ ಉಪಸ್ಥಿತರಿದ್ದರು. ಮೇಲಾಟಗಳಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಮಡಿಕೇರಿ ಸಂತ ಮೈಕಲರ ಪದವಿಪೂರ್ವ ಕಾಲೇಜು ಚಾಂಪಿಯನ್‍ಶಿಪ್ ಪ್ರಶಸ್ತಿ ಪಡೆದುಕೊಂಡರು.