ಮಡಿಕೇರಿ, ಸೆ. 24: ಮಡಿಕೇರಿ ನಗರ ದಸರಾ ಜನೋತ್ಸವದಲ್ಲಿಂದು ಕ್ರೀಡಾಕೂಟಗಳ ಸಂಭ್ರಮ ಕಂಡುಬಂದಿತು. ವಯಸ್ಸಿನ ಮಿತಿ ಅರಿಯದ ಪುಟಾಣಿಗಳಿಂದ ವಯಸ್ಕರವರೆಗೂ ವಿವಿಧ ವಿಭಾಗಗಳಲ್ಲಿ ಕ್ರೀಡಾ ಸಂಭ್ರಮ ಕಂಡುಬಂದಿತು.ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವದು ಮತ್ತು ಕಪ್ಪೆ ಜಿಗಿತ. 1 ರಿಂದ 3ನೇ ತರಗತಿ ಮತ್ತು 4ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 50 ಮೀ. ಮತ್ತು 75 ಮೀ. ಓಟ. 6ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ 100 ಮೀ. ಮತ್ತು 200 ಮೀ. ಓಟ. 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 100 ಮೀ. ಮತ್ತು 400 ಮೀ. ಓಟ. 10ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ ನಿಧಾನಗತಿಯ ಸೈಕಲ್ ಸ್ಪರ್ಧೆ. ಸಾಮಾನ್ಯ ವಿಭಾಗದ ಪುರುಷರಿಗೆ 100 ಮೀ. ಮತ್ತು 400 ಮೀ. ಓಟ, ಭಾರದ ಗುಂಡು ಎಸೆತ, 50 ಮತ್ತು 100 ಮೀ. ಹಗ್ಗಜಗ್ಗಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು. ಸಾಮಾನ್ಯ ವಿಭಾಗದ ಮಹಿಳೆಯರಿಗೆ ಹಗ್ಗ ಜಗ್ಗಾಟ, ಬಾಂಬ್ ಇನ್‍ದಿ ಸಿಟಿ.
ಸಾಮಾನ್ಯ ವಿಭಾಗದಲ್ಲಿ ನಿಧಾನ ಮೋಟಾರ್ ಸೈಕಲ್ ರೇಸ್. ಪತ್ರಕರ್ತರಿಗೆ 100 ಮೀ. ಓಟ, ಭಾರದ ಗುಂಡು ಎಸೆತ. ನಗರಸಭಾ ಸದಸ್ಯರಿಗೆ ಹಾಗೂ ದಸರಾ ಸಮಿತಿ ಸದಸ್ಯರಿಗೆ 100 ಮೀ. ಓಟ, ಭಾರದ ಗುಂಡು ಎಸೆತ.
ನಗರಸಭಾ ನೌಕರರಿಗೆ 100 ಮೀ. ಓಟ, ಭಾರದ ಗುಂಡು ಎಸೆತ ಸ್ಪರ್ಧೆ ನಡೆಯಿತು.
ಕ್ರೀಡಾ ಮನೋಭಾವ ಇರಲಿ: ಡಿಸೋಜಾ
ಮನುಷ್ಯನ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾಮ ನೋಭಾವ ಪ್ರತಿಯೊಬ್ಬನಲ್ಲಿಯೂ ಇದ್ದಲ್ಲಿ ಜೀವನದಲ್ಲಿ ಸುಖ, ಸಂತೋಷ ಹಾಗೂ ಯಶಸ್ಸು ಸಾಧ್ಯವೆಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅಭಿಪ್ರಾಯಪಟ್ಟರು. ನಗರಸಭಾ ಕ್ರೀಡಾಸಮಿತಿ ಆಯೋಜಿಸಿದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ಸಿಗುವದು ಅಸಾಧ್ಯ. ಆದರೆ ಕ್ರೀಡಾ ಮನೋಭಾವ ದಿಂದ ಪ್ರತಿಯೊಬ್ಬರ (ಮೊದಲ ಪುಟದಿಂದ) ಭಾಗವಹಿಸುವಿಕೆ ಮುಖ್ಯವೆಂದು ಹೇಳಿದರು.
ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ ಮಡಿಕೇರಿ ದಸರಾ ಕ್ರೀಡಾಕೂಟ ಹಲವು ವರ್ಷ ಗಳಿಂದ ತನ್ನದೇ ಆದ ಛಾಪು ಮೂಡಿಸಿಕೊಂಡು ಬಂದಿದೆ. ಅನುದಾನ ಕಡಿಮೆ ಇದ್ದರೂ ಈ ಬಾರಿ ಕ್ರೀಡಾಸಮಿತಿ ಉತ್ತಮವಾಗಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿದೆ. ಮುಂದಿನ ದಿನಗಳಲ್ಲಿ ದಸರಾ ಕ್ರೀಡಾಕೂಟ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ ಹಾಗೂ ನಗರಸಭಾ ಸದಸ್ಯ ಪಿ.ಡಿ. ಪೊನ್ನಪ್ಪ ಮಾತನಾಡಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಟವಾಡಿದ ಕ್ರೀಡಾಪಟುಗಳು ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅದೇ ರೀತಿಯಲ್ಲಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಕೂಟಗಳು ಕೂಡ ಸಾಧನೆ ಮಾಡುವಂತಾಗ ಬೇಕು ಎಂದು ಹೇಳಿದರು.
ಇದೇ ಸಂದರ್ಭ ಚುಮ್ಮಿ ದೇವಯ್ಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಲ್ಲಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಯಾವದೇ ರೀತಿಯ ಕಾಂಕ್ರೀಟೀಕರಣಕ್ಕೆ ಅವಕಾಶ ನೀಡದೆ ಕ್ರೀಡಾಪಟು ಗಳಿಗೆ ಉತ್ತಮ ಕ್ರೀಡಾಂಗಣ ರೂಪಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭ ಅಂತ ರ್ರಾಷ್ಟ್ರೀಯ ಓಟಗಾರ ಹಾಗೂ ಸೈನಿಕ, ನಗರದ ಕನ್ನಂಡಬಾಣೆ ನಿವಾಸಿ ತಿಲಕ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ರಾಷ್ಟ್ರಮಟ್ಟದ ಓಟಗಾರ, ಪೊಲೀಸ್ ಸಿಬ್ಬಂದಿ ಜಯರಾಂ ನಗರದ ಚೌಡೇಶ್ವರಿ ದೇವಾಲಯ ದಿಂದ ಕ್ರೀಡಾ ಜ್ಯೋತಿಯನ್ನು ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ತಂದರು.
ವೇದಿಕೆಯಲ್ಲಿ ನಗರ ದಸರಾ ಸಮಿತಿ ಗೌರವಾಧ್ಯಕ್ಷ ಸತೀಶ್ ಪೈ, ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಉದ್ಯಮಿ ಪ್ರಸನ್ನಭಟ್ ಹಾಗೂ ಇನ್ನಿತರರು ಇದ್ದರು.
ನಗರ ದಸರಾ ಕ್ರೀಡಾಸಮಿತಿ ಅಧ್ಯಕ್ಷ ಬಿ.ಕೆ. ಜಗದೀಶ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೆ.ಎಸ್. ರಾಜೇಶ್ ಸ್ವಾಗತಿಸಿದರೆ, ಉಪಾಧ್ಯಕ್ಷ ದೇವರಾಜ್ ವಂದಿಸಿದರು.