ಮಡಿಕೇರಿ, ಸೆ. 24: ನಿನ್ನೆ ಕುಶಾಲನಗರದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಪ್ರಶಾಂತ್ ಮೆಲ್ವಿನ್ ಎಂಬಾತ ಕಾವೇರಿ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ನೀರು ಪಾಲಾಗಿದ್ದು, ಆತನ ಶವ ಇಂದು ಲಭಿಸಿದೆ.ನಿನ್ನೆ ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದ ಸ್ಥಳದಲ್ಲಿ ಅನತಿ ದೂರದ ಎರಡು ಬಂಡೆಗಳ ನಡುವೆ ಸುಮಾರು 18 ಅಡಿ ಆಳದಲ್ಲಿ; ಇಂದು ಮುಳುಗು ತಜ್ಞರು ವಿದ್ಯಾರ್ಥಿಯ ಶವ ಸಿಲುಕಿದ್ದನ್ನು ಪತ್ತೆ ಹಚ್ಚಿ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.ಕುಶಾಲನಗರ ಠಾಣಾಧಿಕಾರಿ ಜಗದೀಶ್ ಹಾಗೂ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದು, ಬೆಳಿಗ್ಗೆ 7 ಗಂಟೆಯಿಂದ ಸುಮಾರು 11.30ರ ತನಕ ಕಾರ್ಯಾಚರಣೆ ನಡೆಸಲಾಯಿತು. ಮುಳುಗು ತಜ್ಞ ರಾಮಕೃಷ್ಣ ಹಾಗೂ ಶಿವಪಕೀರ ಎಂಬಿಬ್ಬರು ಪ್ರಶಾಂತ್ ಶವ ಪತ್ತೆಹಚ್ಚುವಲ್ಲಿ ಶ್ರಮಿಸಿದ್ದರು.
ಬಳಿಕ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಯೊಂದಿಗೆ, ಸಕಲೇಶಪುರದಿಂದ ಬಂದಿದ್ದ ಮೃತನ ಪೋಷಕರಿಗೆ ಶವವನ್ನು ಹಸ್ತಾಂತರಿಸಲಾಯಿತು.
ಚಿತ್ರ: ವರದಿ: ಟಿ.ಜಿ. ಸತೀಶ್.