ಮಡಿಕೇರಿ, ಸೆ. 24: ಅಡುಗೆ ಮನೆಯ ದೈನಂದಿನ ತಿನಿಸುಗಳೊಂದಿಗೆ, ಹೊಲದಲ್ಲಿ ಬೆಳೆಯುವ ಸೊಪ್ಪು ತರಕಾರಿಗಳ ಸಹಿತ, ಗೃಹಾಲಂಕಾರಕ್ಕೆ ಹೂದೋಟದಲ್ಲಿ ಬೆಳೆಯುವ ಸುಮರಾಶಿ, ಮಹಿಳೆಯರ ಶೃಂಗಾರದೊಂದಿಗೆ ಹಳ್ಳಿ ಹೆಂಗಳೆಯರ ಕ್ರೀಡೆಗಳು ಸೇರಿದಂತೆ ವೈವಿದ್ಯಮಯ ಸ್ಪರ್ಧಾ ಕಾರ್ಯಕ್ರಮಗಳು ಇಂದಿನ ಮಹಿಳಾ ದಸರಾದಲ್ಲಿ ವಿಜೃಂಬಿಸಿದವು.ಕರ್ನಾಟಕ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಹಿಳಾ ಲೋಕದಲ್ಲಿ ಸ್ವತಃ ಸಂಭ್ರಮ ಕಣ್ತುಂಬಿಕೊಂಡು ಹರ್ಷಚಿತ್ತದಿಂದ ಉದ್ಘಾಟಿಸಿದರಲ್ಲದೆ, ರೂ. 25 ಸಾವಿರ ಅನುದಾನ ಘೋಷಿಸಿದರು. ಗ್ರಾಮೀಣ ಭಾಗದಿಂದ ಬೆಳೆದು ಬಂದಿರುವ ತನಗೆ ಹೆಣ್ಣಿನ ಬದುಕಿನ ನೈಜ ಅರಿವಿದ್ದು, ಅಂತಹ ಬದುಕಿಗೆ ಇಂದಿನ ಮಹಿಳಾ ದಸರಾ ಸಂಭ್ರಮವು ಮೌಲ್ಯ ತಂದುಕೊಟ್ಟಿದೆ ಎಂದು ಶ್ಲಾಘನೆಯ ನುಡಿಯಾಡಿದರು.

ದೈನಂದಿನ ಸಂಸಾರದೊಳಗಿನ ಬದುಕಿನ ಜೊತೆಯಲ್ಲಿ ಸಾಮಾಜಿಕ ಹೊಣೆಗಾರಿಕೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ತೊಡಗಿಸಿಕೊಳ್ಳುತ್ತಿ ರುವದು ಹೆಮ್ಮೆಯ ಸಂಗತಿ ಎಂದು ವೀಣಾ ಮಾರ್ನುಡಿದರು.

ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ನಡೆದ 5ನೇ ವರ್ಷದ ಮಹಿಳಾ ದಸರಾವನ್ನು ವೀಣಾ ಅಚ್ಚಯ್ಯ ಪೌರ ಕಾರ್ಮಿಕರೊಡಗೂಡಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಸಾಧನೆಯ ಹಾದಿಯಲ್ಲಿರುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕಿದ್ದು, ಯಾವದಕ್ಕೂ ಮಣಿಯದೇ ಸಮಾಜವನ್ನು ಮುನ್ನಡೆಸುವಲ್ಲಿ ಒಗ್ಗಾಟ್ಟಾಗಿ ದುಡಿಯಬೇಕು ಎಂದು ಕಿವಿಮಾತು ಹೇಳಿದರು.

ಕೇಂದ್ರ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ದಸರಾ ಇತಿಹಾಸವನ್ನು ಮೆಲುಕು ಹಾಕಿ, ಮಹಿಳಾ ದಸರಾಗೆ ಶುಭ ಹಾರೈಸಿದರು.

(ಮೊದಲ ಪುಟದಿಂದ) ಕೂಡಿಗೆ ಕ್ರೀಡಾ ಶಾಲೆಯ ಪ್ರಾಂಶುಪಾಲೆ ಕುಂತಿ ಬೋಪಯ್ಯ ತೊಟ್ಟಿಲು ತೂಗುವ ಕೈಗಳು ಇಂದು ದೇಶವನ್ನು ಅಳಬಲ್ಲದು ಎಂಬುದನ್ನು ಮಹಿಳೆ ವಿವಿಧ ರಂಗದಲ್ಲಿ ಸಾಭೀತು ಪಡಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ದಸರಾ ಯಶಸ್ಸಿಗೆ ಹಾರೈಸಿದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪೌರಯುಕ್ತೆ ಶುಭ, ಕೆ.ಎಸ್.ಆರ್.ಟಿ.ಸಿ. ಮಡಿಕೇರಿ ವಿಭಾಗ ವ್ಯವಸ್ಥಾಪಕಿ ಗೀತಾ, ದಸರಾ ಸಮಿತಿ ಖಜಾಂಜಿ ಸಂಗೀತ ಪ್ರಸನ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಮುಮ್ತಾಜ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಅಧ್ಯಕ್ಷೆ ಮೇರಿ ಅಂಬುದಾಸ್, ನಗರಸಭಾ ಸದಸ್ಯರು ಹಾಗೂ ಮತ್ತಿತರರ ಮಹಿಳೆಯರು ಪಾಲ್ಗೊಂಡಿದ್ದರು. ರುಕ್ಮಿಣಿ ಪ್ರಾರ್ಥನೆ, ಉಪಾಧ್ಯಕ್ಷೆ ಅನಿತಾ ಪೂವಯ್ಯ ಪ್ರಾಸ್ತಾವಿಕ, ಸದಸ್ಯೆ ತಜುಸ್ಸಂ ಸ್ವಾಗತ ನೆರವೇರಿಸಿದರು. ವಿವಿಧ ಸ್ಪರ್ಧೆಗಳೊಂದಿಗೆ ಸಂಜೆಗತ್ತಲೆ ನಡುವೆ ಸಾಂಸ್ಕøತಿಕ ಸಂಭ್ರಮಕ್ಕೆ ಮಹಿಳಾ ದಸರಾ ಸಾಕ್ಷಿಯಾಯಿತು. ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್ ಬಳಗ ಮಹಿಳಾ ದಸರಾ ಯಶಸ್ಸಿಗೆ ಪ್ರಯತ್ನಶೀಲರಾಗಿದ್ದು ಕಂಡುಬಂತು.

ಮೆಹಂದಿ ಹಾಕಿಸಿಕೊಳ್ಳುವ ಮೂಲಕ ದಸರಾದ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಕೇಂದ್ರ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಚಾಲನೆ ನೀಡಿದರು.

ಫ್ಯಾನ್ಸಿ ಡ್ರೆಸ್: ಮಹಿಳಾ ದಸರಾದ ಪ್ರಮುಖ ಆಕರ್ಷಣೆಯಲ್ಲಿ ಫ್ಯಾನ್ಸಿ ಡ್ರೆಸ್ ಕೂಡ ಒಂದು. ಭಾರತೀಯ ಸಾಂಪ್ರದಾಯಿಕ ಉಡುಪಿನಲ್ಲಿ ನಡೆದ ಕಾರ್ಯಕ್ರಮ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ಯುವತಿಯರು, ಮಹಿಳೆಯರು ವೇದಿಕೆ ಮೇಲೆ ಬಳುಕುತ್ತಾ ಹೆಜ್ಜೆ ಹಾಕಿ ಪ್ರೇಕ್ಷಕರ ಮನ ಸೆಳೆದರು. ಟಿಬೆಟ್ ಡ್ರೆಸ್, ತಮಿಳುನಾಡಿನ ಸಾಂಪ್ರದಾಯಿಕ ಉಡುಪು, ಕ್ರಿಶ್ಚಿಯನ್ ಗೌನ್, ಬಂಗಾಳಿ ಸ್ಯಾರಿ, ಕೊಡಗಿನ ಕೊಡವ, ಗೌಡ ಸಂಸ್ಕøತಿಯನ್ನು ಬಿಂಬಿಸುವ ಉಡುಪುತೊಟ್ಟ ಮಹಿಳೆಯರು ವೇದಿಕೆ ಮೇಲೆ ತಮ್ಮದೇ ಆದ ಝಲಕ್ ತೋರಿದರು.

ಪ್ರಸ್ತುತ ದಿನಗಳಲ್ಲಿ ತ್ವರಿತ ಆಹಾರಕ್ಕೆ ಜನರು ಹೆಚ್ಚು ಆಕರ್ಷಿತರಾಗುತ್ತಿರುವದರಿಂದಾಗಿ ಅಂಥವರ ಆರೋಗ್ಯ ಮತ್ತು ಜೀವನ ಶೈಲಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಸಿರಿಧಾನ್ಯಗಳಿಂದಲೇ ಮಾಡಿದ ಆಹಾರಗಳ ಪ್ರಚಾರ ಹೆಚ್ಚಬೇಕೆಂಬ ಉದ್ದೇಶದಿಂದ ನಡೆದ ಎರಡನೇ ವರ್ಷದ ಸಿರಿಧಾನ್ಯ ಮೇಳ ಸ್ಪರ್ಧೆಯಲ್ಲಿ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡರು.

ಮೇಳದಲ್ಲಿ ಕೊರಲೆ, ಬರಗು, ಸಾಮೆ, ಅರ್ಕ, ನವಣೆ, ಊದಲು, ಸಜ್ಜೆ, ಜೋಳ, ರಾಗಿ ಇತ್ಯಾದಿ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು, ಸಲಾಡ್‍ಗಳನ್ನು ಇಡಲಾಗಿತ್ತು. ಇನ್ನೂ ವಿವಿಧ ರೀತಿಯ ಸೊಪ್ಪು, ಚಟ್ನಿಪುಡಿ, ಅಕ್ಕಿರೋಟ್ಟಿ, ನೀರುದೋಸೆ ವಿವಿಧ ರೀತಿಯ ತಿಂಡಿಗಳ ಪ್ರದರ್ಶನದಲ್ಲಿ ಗಮನ ಸೆಳೆಯಿತು.