ಮೂರ್ನಾಡು, ಸೆ. 24 : ಮೂರ್ನಾಡು ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಂ ಹಬ್ಬದ ಕಾರ್ಯಕ್ರಮ ವಿಜೃಂಭಣೆಯಿಂದ ಭಾನುವಾರ ಜರುಗಿತು.
ಇಲ್ಲಿನ ಗೌಡ ಸಮಾಜದಲ್ಲಿ ಆಯೋಜಿಸಲಾದ 9ನೇ ವರ್ಷದ ಓಣಂ ಹಬ್ಬದ ಕಾರ್ಯಕ್ರಮವನ್ನು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ ಉದ್ಘಾಟಿಸಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿದ್ದಾಪುರ ಕೈರಳಿ ಸಮಾಜದ ಅಧ್ಯಕ್ಷ ಶ್ರೀನಿವಾಸ್, ವಿರಾಜಪೇಟೆ ಪಟ್ಟಣ ಪಂಚಾಯತ್ ಅಧ್ಯಕ್ಷ ಈ.ಸಿ. ಜೀವನ್, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ, ಕುಶಾಲನಗರ ಕೇರಳ ಸಮಾಜ ಅಧ್ಯಕ್ಷ ಕೆ.ಆರ್. ಶಿವನಂದ್, ಚೆಟ್ಟಳ್ಳಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಶಶಿಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಮೂರ್ನಾಡು ಗೌಡ ಸಮಾಜ ಅಧ್ಯಕ್ಷ ಚೆಟ್ಟಿಮಾಡ ಸಿ. ಕಾರ್ಯಪ್ಪ, ಕಾಂಗ್ರೆಸ್ ಮೂರ್ನಾಡು ವಲಯ ಸಮಿತಿ ಅಧ್ಯಕ್ಷ ಮುಂಡಂಡ ಕೆ. ಭಾಗೇಶ್, ಸೋಮವಾರಪೇಟೆ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಪ್ರಕಾಶ್, ಮರಗೋಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಬಾಲಕೃಷ್ಣ ಉಪಸ್ಥಿತರಿದ್ದರು. ಮೂರ್ನಾಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು ಅಧ್ಯಕ್ಷತೆ ವಹಿಸಿದ್ದರು.
ಮೆರವಣಿಗೆ : ಸಮಾರಂಭಕ್ಕೂ ಮುನ್ನ ಹಬ್ಬದ ಕಾರ್ಯಕ್ರಮ ಪ್ರಯುಕ್ತ ಪಟ್ಟಣದ ಮುಖ್ಯ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸಿಂಗಾರಿ ಮೇಳದೊಂದಿಗೆ ಗೌಡ ಸಮಾಜದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಮಹಾಬಲಿ, ತೆಯ್ಯಂ ವೇಷಧಾರಿಗಳು ಮೆರವಣಿಗೆಗೆ ಮೆರಗು ತಂದರು. ಕೇರಳೀಯ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಮಹಿಳೆಯರು ಹಾಗೂ ಪುರುಷರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಹೂವಿನ ರಂಗೋಲಿ ಸ್ಪರ್ಧೆ : ಗೌಡ ಸಮಾಜದ ಆವರಣದಲ್ಲಿ ಸದಸ್ಯರಿಗೆ ಹೂವಿನ ರಂಗೋಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 6 ತಂಡಗಳು ಪಾಲ್ಗೊಂಡು ಪುರುಷರು, ಮಹಿಳೆಯರು, ಮಕ್ಕಳು ಎನ್ನುವ ಬೇಧವಿಲ್ಲದೆ ಒಂದಕ್ಕಿಂತ ಒಂದು ಅಂದದ ಹೂವಿನ ರಂಗೋಲಿಗಳನ್ನು ರಚಿಸಿ ಪೈಪೋಟಿ ನೀಡಿದರು. ಎಂ.ಎಂ. ಚಂದ್ರಿಕ, ಬಾಡಗ(ಪ್ರ), ಮಿಥುನ್ ವಿಶ್ವನಾಥ್, ಕಬ್ಬಡಕೇರಿ(ದ್ವಿ), ಪ್ರಿಯೇಶ್ ಚಿನ್ನ, ಐಕೊಳ(ತೃ) ಬಹುಮಾನ ಪಡೆದುಕೊಂಡರು. ಮಧ್ಯಾಹ್ನ ಬಳಿಕ ಮೂರ್ನಾಡು ಭಾರತೀಯ ನೃತ್ಯ ಕಲಾ ಶಾಲೆ ಹಾಗೂ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ಜರುಗಿತು.