ಮಡಿಕೇರಿ, ಸೆ. 24: ಮಡಿಕೇರಿ ತಾಲೂಕಿನ ಯುವಕ-ಯುವತಿ ಮಂಡಳಿಗಳನ್ನು ಸಧೃಡಗೊಳಿಸುವ ಉದ್ದೇಶದಿಂದ ಯುವಕ-ಯುವತಿ ಮಂಡಳಿಗಳ ಸರ್ವೆ ಕಾರ್ಯವನ್ನು ಯುವ ಒಕ್ಕೂಟದ ಸಹಕಾರದೊಂದಿಗೆ ಈ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ತಾಲೂಕು ಅಧ್ಯಕ್ಷ ನವೀನ್ ದೇರಳ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಕೊಡಗು ಜಿಲ್ಲಾ ನೆಹರು ಯುವ ಕೇಂದ್ರದಲ್ಲಿ ನೋಂದಾಯಿಸಿದ ಯುವಕ-ಯುವತಿ ಮಂಡಳಿಗಳ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ಯುವ ಸಂಘಗಳ ಸರ್ವೆ ಕಾರ್ಯವನ್ನು ನಡೆಸಲು ತಾ. 25 ರಿಂದ 27 ರವರೆಗೆ ನಡೆಸಲಾಗುವದು. ಎನ್.ವೈ.ಕೆ. ಸೇವಾ ಕಾರ್ಯಕರ್ತರು ಹಾಗೂ ತಾಲೂಕು ಯುವ ಒಕ್ಕೂಟದ ಪದಾಧಿಕಾರಿಗಳು ಸರ್ವೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನವೀನ್ ದೇರಳ ತಿಳಿಸಿದ್ದಾರೆ.
ಗ್ರಾ.ಪಂ.ಗಳ ವಿವರ
ತಾ. 25 ರಂದು ನಾಪೋಕ್ಲು, ಬಲ್ಲಮಾವಟಿ, ಎಮ್ಮೆಮಾಡು, ಹೊದ್ದೂರು, ಚೆಯ್ಯಂಡಾಣೆ ಮತ್ತು ಕೊಣಂಜಗೇರಿ ಗ್ರಾ.ಪಂ.ಗಳಿಗೆ ಸಿ.ಯು. ಭೀಮಯ್ಯ, ಸಾಬ ಸುಬ್ರಮಣಿ, ಬಿ.ಎಮ್. ದಿಲೀಪ್ ಹಾಗೂ ಶೋಭಾ ಭೇಟಿ ನೀಡಲಿದ್ದಾರೆ. ಬೆಟ್ಟಗೇರಿ, ಚೇರಂಬಾಣೆ, ಕುಂದಚೇರಿ, ಭಾಗಮಂಡಲ, ಅಯ್ಯಂಗೇರಿ ಮತ್ತು ಕರಿಕೆ ಪ್ರದೇಶಗಳಿಗೆ ಪಿ.ಪಿ. ಸುಕುಮಾರ್, ಇಂದುಮತಿ ಹಾಗೂ ನೇತ್ರಾವತಿ ತೆರಳಲಿದ್ದಾರೆ.
ತಾ. 26 ರಂದು ಮೇಕೇರಿ, ಹಾಕತ್ತೂರು, ಮೂರ್ನಾಡು, ಮರಗೋಡು, ಹೊಸಕೇರಿ ಮತ್ತು ಕಡಗದಾಳು ಗ್ರಾಮ ಪಂಚಾಯಿತಿಗಳಿಗೆ ಟಿ.ಎ. ಕುಮಾರ, ಪಿ.ಪಿ. ಸುಕುಮಾರ್, ಕೆ.ಎಂ. ಮಧು, ತಾ. 27 ರಂದು ಮದೆನಾಡು, ಸಂಪಾಜೆ, ಪೆರಾಜೆ ಮತ್ತು ಚೆಂಬು ಗ್ರಾಮ ಪಂಚಾಯಿತಿಗಳಿಗೆ ನವೀನ್ ದೇರಳ, ಕೆ.ಕೆ. ಗಣೇಶ್, ಧ್ರುವ, ಶಿವಕಾಂತ್ ಹಾಗೂ ಗಾಳಿಬೀಡು, ಕೆ. ನಿಡುಗಣೆ ಮತ್ತು ಮಕ್ಕಂದೂರು ಗ್ರಾ.ಪಂ.ಗಳಿಗೆ ಕೆ.ಎಂ. ಮಧು, ಕೆ.ಎ. ಮೋಹನ್, ರಮೇಶ್ ಆಚಾರ್ಯ ಭೇಟಿ ನೀಡಲಿದ್ದಾರೆ.
ಸಂಘದ ಬೈಲಾ, ಈಗಿರುವ ಕಾರ್ಯಕಾರಿ ಸಂಘದ ಪಟ್ಟಿ, ಸಂಘದ ನೋಂದಾವಣಿ ಪತ್ರ, ಎನ್.ವೈ.ಕೆ ಸಂಯೋಜನಾ ಪತ್ರ, ಅಧ್ಯಕ್ಷರ ಭಾವಚಿತ್ರ, ಸಂಘದ ಮೊಹರು, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಂಘದ ಸದಸ್ಯರಾದವರು 15 ರಿಂದ 29 ವರ್ಷದ ಒಳಗಿರುವವರ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಇ-ಮೇಲ್ ಐಡಿ, ರಕ್ತದ ಗುಂಪು, ಜನ್ಮ ದಿನಾಂಕದ ದಾಖಲೆಗಳ ಪ್ರತಿಗಳನ್ನು ಹಾಜರುಪಡಿಸಬೇಕೆಂದು ನವೀನ್ ದೇರಳ ತಿಳಿಸಿದ್ದಾರೆ.
ಗ್ರಾ.ಪಂ.ಗಳ ವ್ಯಾಪ್ತಿಗೆ ಬರುವ ಯುವಕ-ಯುವತಿ ಮಂಡಳಿಗಳ ಪದಾಧಿಕಾರಿಗಳು ಸದರಿ ದಿನಾಂಕದಂದು ದಾಖಲಾತಿಯೊಂದಿಗೆ ಗ್ರಾ.ಪಂ. ಆವರಣದಲ್ಲಿ ಹಾಜರಿರುವಂತೆ ಸಲಹೆ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ 9449952008 ಹಾಗೂ 9901316315 ಸಂಪರ್ಕಿಸಬಹುದಾಗಿದೆ.