ಮಡಿಕೇರಿ, ಸೆ. 24: ಚೆರಿಯಪರಂಬು ಮಖಾಂ ಉರೂಸ್ 2018ರ ಫೆಬ್ರವರಿ 23 ರಿಂದ 27ರವರೆಗೆ ನಡೆಯಲಿದ್ದು, ಉರೂಸ್ ಆರಂಭಕ್ಕೆ ಮೊದಲು ಸ್ಥಳೀಯ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಚೆರಿಯಪರಂಬು ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಸೀದಿಯ ಕಾರ್ಯದರ್ಶಿ ಪಿ.ಎಂ. ಅಬ್ದುಲ್ ಕರೀಂ, ಮಖಾಂ ಉರೂಸ್‍ನ ಕುರಿತು ಮಾಹಿತಿ ನೀಡಿದರು. ಹಲವಾರು ಶತಮಾನಗಳಿಂದ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಶಹೀದ್ ಅಬ್ದುಲ್ ರಹಿಮಾನ್ ವಲಿಯುಲ್ಲಾ ಉರೂಸ್ ಕಾಯಕ್ರಮವನ್ನು ಪ್ರತಿ ವರ್ಷ ಸರ್ವ ಧರ್ಮೀಯರು ಒಗ್ಗೂಡಿ ನಡೆಸಲಾಗುತ್ತಿದೆ. ಇದೊಂದು ಹಿಂದೂ, ಮುಸ್ಲಿಂ ಐಕ್ಯತೆಯ ಸ್ಥಳವಾಗಿದ್ದು, ದರ್ಗಾದಲ್ಲಿ ಮುಂದಿನ ವರ್ಷ ಫೆ. 23 ರಿಂದ ಐದು ದಿನಗಳ ಕಾಲ ವಾರ್ಷಿಕ ಉರೂಸ್ ನಡೆಯಲಿದೆ. ಹಲವು ಪವಾಡಗಳಿಗೆ ಸಾಕ್ಷಿಯಾಗಿರುವ ಚೆರಿಯಪರಂಬು ದರ್ಗಾದಲ್ಲಿ ನಡೆಯುವ ಉರೂಸ್‍ನಲ್ಲಿ ಕರ್ನಾಟಕ ಹಾಗೂ ಕೇರಳದ ಪ್ರಸಿದ್ಧ ವಾಗ್ಮಿಗಳು, ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಫೆ. 26 ರಂದು ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ. ಉರೂಸ್ ಪ್ರಚಾರ ಕಾರ್ಯಕ್ರಮಕ್ಕೆ ಈಗಾಗಲೆ ಚಾಲನೆ ನೀಡಲಾಗಿದ್ದು, ಸರ್ವ ಧರ್ಮೀಯರು ಉರೂಸ್ ಯಶಸ್ಸಿಗೆ ಕೈಜೋಡಿಸುತ್ತಿದ್ದಾರೆ ಎಂದು ಅಬ್ದುಲ್ ಕರೀಂ ತಿಳಿಸಿದರು. ದರ್ಗಾಕ್ಕೆ ತೆರಳುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಗಮನ ಹರಿಸಿ ಉರೂಸ್‍ಗೆ ಮುಂಚಿತವಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷÀ ಬಷೀರ್ ಆಲಿ, ಸಹಕಾರ್ಯದರ್ಶಿ ಸಿ.ಎಂ. ಉಸ್ಮಾನ್, ಪ್ರಮುಖರಾದ ಮಜೀದ್ ಹಾಗೂ ಎಸ್.ಹೆಚ್. ಇರ್ಷಾದ್ ಉಪಸ್ಥಿತರಿದ್ದರು.