ಸೋಮವಾರಪೇಟೆ, ಸೆ. 24: ಅಹಿಂದ ಪರ ಒಲವು ಹೊಂದಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿಂತನೆಯಲ್ಲಿ ಅಸ್ತಿತ್ವಕ್ಕೆ ಬಂದ ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭವಾದ ಒಂದೂವರೆ ತಿಂಗಳಿನಲ್ಲಿಯೇ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಸೋಮವಾರಪೇಟೆಯಲ್ಲಿರುವ ವಸತಿ ಶಾಲೆ ‘ಟೂರಿಂಗ್ ಟಾಕೀಸ್’ ನಂತಾಗಿದ್ದು, ವಿದ್ಯಾರ್ಥಿಗಳಿಗೆ ಭದ್ರ ನೆಲೆ ಇಲ್ಲದಂತಾಗಿದೆ. ಸದ್ಯ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಅಂಬೇಡ್ಕರ್ ವಸತಿ ಶಾಲೆ ನಡೆಯುತ್ತಿದ್ದು, ಪ್ರಸ್ತುತ ಮಕ್ಕಳು ಶೋಚನೀಯ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಮುಖ್ಯಮಂತ್ರಿಗಳು ಅಂಬೇಡ್ಕರ್ ವಸತಿ ಶಾಲೆಯನ್ನು ಘೋಷಣೆ ಮಾಡಿದ್ದು, ಅದರಂತೆ ಪ್ರಕ್ರಿಯೆಗಳು ನಡೆದು ಸೋಮವಾರಪೇಟೆಯಲ್ಲಿ ಜೂನ್ ಕೊನೆಯ ವಾರದಿಂದ ಹಾಸ್ಟೆಲ್ ಮತ್ತು ತರಗತಿಗಳು ಪ್ರಾರಂಭವಾಗಿವೆ. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಈ ವರ್ಷ 6ನೇ ತರಗತಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದ್ದು ಅದರಂತೆ 43 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳೇ ಅಧಿಕವಿರುವ ವಸತಿ ಶಾಲೆಯಲ್ಲಿನ ಮಕ್ಕಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿವೆ. ಮೆಟ್ರಿಕ್ಪೂರ್ವ ಬಾಲಕಿಯರ ವಿದ್ಯಾರ್ಥಿಗಳ ನಿಲಯದಲ್ಲಿ 24 ಮಕ್ಕಳು ತಂಗಿದ್ದು, ಇದೇ ಆವರಣದಲ್ಲಿರುವ ಅಂಬೇಡ್ಕರ್ ವಸತಿ ನಿಲಯದಲ್ಲಿ 43 ಮಕ್ಕಳು ಇದ್ದಾರೆ. 43 ಮಕ್ಕಳನ್ನು ಈ ಹಾಸ್ಟೆಲ್ಗೆ ತಂದು ಬಿಟ್ಟಿರುವ ಆಡಳಿತಗಾರರು ಅವರಿಗೆ ಸೂಕ್ತ ಸೌಕರ್ಯಗಳನ್ನು ಕಲ್ಪಿಸುವದನ್ನೇ ಮರೆತಿದ್ದಾರೆ.
ಪ್ರಮುಖವಾಗಿ ಎರಡೂ ವಿದ್ಯಾರ್ಥಿ ವಸತಿ ನಿಲಯಗಳ ಒಟ್ಟು 67 ವಿದ್ಯಾರ್ಥಿನಿಯರಿಗೆ ಇರುವದು ಮಾತ್ರ 4 ಶೌಚಾಲಯ. 4 ಸ್ನಾನ ಗೃಹಗಳು! ಈ ನಾಲ್ಕರಲ್ಲೇ ಮಕ್ಕಳು ನಿತ್ಯ ಕರ್ಮಗಳನ್ನು ಪೂರೈಸಿ ಕೊಳ್ಳಬೇಕಾದ ದಯನೀಯ ಸ್ಥಿತಿಗೆ ಆಡಳಿತಗಾರರು ಅಡಿಪಾಯ ಹಾಕಿರುವದು ಕಂಡುಬಂದಿದೆ.
ಕಟ್ಟಡ ಕೊರತೆಯ ನೆಪವೊಡ್ಡಿ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಇಲ್ಲಿಗೆ ತಂದು ಬಿಡುವ ಮೊದಲು ಅತೀ ಅಗತ್ಯವಾಗಿ ಬೇಕಾಗಿರುವ ಮೂಲ ಸೌಕರ್ಯ ಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಕುರುಡುತನ ಪ್ರದರ್ಶಿಸಿರುವದು ಕಂಡುಬಂದಿದೆ.
ಕಳೆದ ಒಂದೂವರೆ ತಿಂಗಳಿನಿಂದ ಕಿಷ್ಕಿಂಧೆಯಂತಿರುವ ಕೊಠಡಿಯಲ್ಲಿ 43 ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದಾರೆ. ನೆಲದ ಮೇಲೆ ಬೆಡ್ಗಳನ್ನು ಹಾಕಿ, ಅದರ ಮೇಲೆ ಕುಳಿತು ಪಾಠ ಓದಬೇಕಾದ ಅನಿವಾರ್ಯತೆ ಇವರಿಗೆ ಒದಗಿದೆ. ಇದರೊಂದಿಗೆ ತಮ್ಮ ಬಟ್ಟೆಬರೆ, ಇತರ ಸಾಮಗ್ರಿ ಸರಂಜಾಮುಗಳನ್ನು ಇಟ್ಟುಕೊಳ್ಳಲೂ ಸಹ ಜಾಗದ ಕೊರತೆ ಎದುರಾಗಿದೆ.
ತಾತ್ಕಾಲಿಕವಾಗಿ ಮಕ್ಕಳನ್ನು ಇಲ್ಲಿ ಇರಿಸಲಾಗಿದೆ. ಮುಂದೆ ವ್ಯವಸ್ಥೆಯಾದ ನಂತರ ಸ್ಥಳಾಂತರಿಸುತ್ತೇವೆ ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದು, 67 ಮಕ್ಕಳು ನಾಲ್ಕೇ ನಾಲ್ಕು ಶೌಚಾಲಯ ಬಳಸಬೇಕಾದ ದುಸ್ಥಿತಿಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದರೊಂದಿಗೆ ಇರುವ 4 ಶೌಚಾಲಯದಲ್ಲಿ ಒಂದಕ್ಕೆ ಚಿಲಕ ಇಲ್ಲ! ಮಳೆ ಬಂದರೆ ಕೆಲವೆಡೆ ನೀರು ಸೋರಿಕೆಯಾಗುತ್ತಿದ್ದರೆ, ಮೋಟಾರ್ ದುರಸ್ತಿಯಿಂದಾಗಿ ಶೌಚಾಲಯ, ಸ್ನಾನ ಗೃಹಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. 67 ಮಕ್ಕಳು ತಮ್ಮ ಬಟ್ಟೆಗಳನ್ನು ಒಗೆಯಲು ಇರುವದು ಮೂರೇ ಮೂರು ಕಲ್ಲು! ನಿತ್ಯಕರ್ಮ, ಬಟ್ಟೆ ಒಗೆಯಲು ನೀರೂ ಸಾಲುತ್ತಿಲ್ಲ ಎಂಬ ಅಳಲು ಇಲ್ಲಿ ತಂಗಿರುವ ವಿದ್ಯಾರ್ಥಿನಿಯರದ್ದಾಗಿದೆ.
ಅಂಬೇಡ್ಕರ್ ವಸತಿ ನಿಲಯಕ್ಕೆ ಕೊಡಗು ಮಾತ್ರವಲ್ಲದೇ ಹಾಸನ, ಅರಕಲಗೂಡಿನಿಂದಲೂ ವಿದ್ಯಾರ್ಥಿ ಗಳು ಬಂದಿದ್ದಾರೆ. ಪ್ರವೇಶ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿ ಉತ್ತಮ ಸೌಲಭ್ಯ, ವಿದ್ಯಾಭ್ಯಾಸ, ಭವಿಷ್ಯ ಅರಸಿ ಬಂದ ಮಕ್ಕಳು ಕನಿಷ್ಟ ಸೌಕರ್ಯ ಗಳಿಗೂ ಪರದಾಡುವಂತಾಗಿದೆ. ‘ಮರದಡಿಯಲ್ಲಿ ಕುಳಿತು ಓದಬಹುದು; ಆದರೆ ಟಾಯ್ಲೆಟ್ ರೂಂ ಇಲ್ಲದಿದ್ದರೆ ಏನ್ ಮಾಡೋದು?’ ಎಂದು ವಿದ್ಯಾರ್ಥಿನಿಯರು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಇಲಾಖೆಯ ಅಧಿಕಾರಿಗಳಲ್ಲಿ ಮಾಹಿತಿ ಬಯಸಿದ ಸಂದರ್ಭ ತೋಳೂರು ಶೆಟ್ಟಳ್ಳಿಯಲ್ಲಿ ಸದ್ಯ ಮುಚ್ಚಿರುವ ಪ್ರಸಾದ್ ಪ್ರೌಢಶಾಲೆಯನ್ನು ಅಂಬೇಡ್ಕರ್ ವಸತಿ ಶಾಲೆಯಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರೊಂದಿಗೆ ಸಮಾಲೋಚಿಸಿದ್ದು, ಅಲ್ಲಿ ಮೂಲಸೌಕರ್ಯ ಕಲ್ಪಿಸುವ ಸಂಬಂಧ ನಿರ್ಮಿತಿ ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ. ಸೌಕರ್ಯಗಳು ಲಭ್ಯವಾದೊಡನೆ ಮಕ್ಕಳನ್ನು ಅಲ್ಲಿಗೆ ಕರೆದೊಯ್ಯ ಲಾಗುವದು ಎಂದು ತಿಳಿಸಿದ್ದಾರೆ.
ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯೆ ತಂಗಮ್ಮ ಟೀಚರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರುಗಳು ವಿದ್ಯಾರ್ಥಿ ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಆದಷ್ಟು ಶೀಘ್ರವಾಗಿ ವಿದ್ಯಾರ್ಥಿನಿಯರ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದಾರೆ. ಈ ಭರವಸೆ ಕಾರ್ಯರೂಪಕ್ಕೆ ಬಂದು ಆದಷ್ಟು ಶೀಘ್ರ ಸೌಲಭ್ಯ ದೊರೆತರೆ ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.
- ವಿಜಯ್ ಹಾನಗಲ್