ವೀರಾಜಪೇಟೆ: ಸೆ24 ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ದರೋಡೆ ಹಾಗೂ ಎರಡು ದಿನಗಳ ಹಿಂದೆ ಇಲ್ಲಿನ ದೊಡ್ಡಟ್ಟಿ ಚೌಕಿಯ ಲಾಡ್ಜ್‍ನ ಕೊಠಡಿಯಲ್ಲಿ ಕಳವು ಮಾಡಿದ್ದ ಕಳವು ಜಾಲದ ನಾಲ್ವರ ತಂಡವನ್ನು ಇಲ್ಲಿನ ನಗರ ಪೊಲೀಸರು ನ್ಯಾಯಾಲಯದ ಮುಂದೆ ನಿನ್ನೆ ದಿನ ಹಾಜರು ಪಡಿಸಿ ಆರೋಪಿಗಳನ್ನು 15ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಎರಡು ದಿನಗಳ ಹಿಂದೆ ಬೆಂಗಳೂರಿನ ಪೂಜಾ ಕ್ರಾಪ್ಟ್ ಕಂಪೆನಿಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಲಾಡ್ಜ್‍ನಲ್ಲಿ ಕೊಠಡಿ ಪಡೆದು ಪಕ್ಕದಲ್ಲಿಯೇ ವಾಯು ವಿಹಾರಕ್ಕೆ ಹೋಗಿದ್ದಾಗ ಕೊಠಡಿಯಲ್ಲಿದ್ದ ರೂ 9000 ನಗದು ಹಾಗೂ ಎರಡು ಮೊಬೈಲ್‍ಗಳನ್ನು ಕಳುವಾಗಿದ್ದುದನ್ನು ಪೊಲೀಸರು ತನಿಖೆ ನಡೆಸಿ ಬೆಳ್ಳುಮಾಡು ಗ್ರಾಮದ ಕೆ.ಆಕಾಶ್, ಕೆದಮುಳ್ಳೂರಿನ ಪೊನ್ನಪ್ಪ ಅಲಿಯಾಸ್ ಅಜಿತ್, ಬೆಂಗಳೂರಿನ ಮಂಜುನಾಥ್ ಅಲಿಯಾಸ ಸಚಿನ್ ಹಾಗೂ ಚಿಟ್ಟಡೆ ಗ್ರಾಮದ ಅಸ್ಗರ್ ಎಂಬಾತನನ್ನು ಬಂಧಿಸಿ ನಗದು ಮೊಬೈಲ್‍ಗಳನ್ನು ವಶ ಪಡಿಸಿಕೊಂಡು ವಿಚಾರಣೆಗೊಳಪಡಿಸಿದ್ದರು. ತನಿಖೆ ಸಮಯದಲ್ಲಿ ಸಂಶಯದ ಮೇರೆ ಆರೋಪಿ ಅಸ್ಗರ್‍ನನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ ಮೇ20 ರಂದು ಇಲ್ಲಿನ ತೆಲುಗರಬೀದಿಯ ದಖ್ಖನಿ ಮೊಹಲ್ಲಾಕ್ಕೆ ತೆರಳುವ ತಿರುವಿನಲ್ಲಿ ನಡೆದ ದರೋಡೆ ಯತ್ನದ ಪ್ರಕರಣ ಬೆಳಕಿಗೆ ಬಂತೆನ್ನಲಾಗಿದೆ. ಪೊಲೀಸರ ವಿಚಾರಣೆ ಸಮಯದಲ್ಲಿ ಅಸ್ಗರ್ ನಾಲ್ಕು ತಿಂಗಳ ಹಿಂದೆ ನಡೆದ ದರೋಡೆಯತ್ನದ ವಿವರ ನೀಡಿದ್ದು ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳ ವಿಳಾಸ ಪೊಲೀಸರಿಗೆ ನೀಡಿರುವದಾಗಿ ಹೇಳಲಾಗಿದೆ.

ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‍ನ ವ್ಯವಸ್ಥಾಪಕ ಸುಭಾಶ್ ಎಂಬವರು ಮೇ 20ರಂದು ರಾತ್ರಿ 9-30ರ ವೇಳೆ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಮೂರು ಮಂದಿ ಅವರ ಕಣ್ಣಿಗೆ ಖಾರದ ಪುಡಿ ಎರಚಿ ರೂ. ಎರಡು ಲಕ್ಷ ನಗದು ಹಣದ ಪರ್ಸ್‍ನ್ನು ದರೋಡೆ ಮಾಡಲು ಯತ್ನಿಸಿದ್ದು ಅಕ್ಕ ಪಕ್ಕದ ನಿವಾಸಿಗಳು ಬರುವಷ್ಟರಲ್ಲಿ ಮೂರು ಮಂದಿ ತಲೆ ಮರೆಸಿಕೊಂಡಿದ್ದರು.