ಶ್ರೀಮಂಗಲ, ಸೆ. 24: ಕೊಡಗು ಜಿಲ್ಲೆ, ಹೊರಜಿಲ್ಲೆ ಹಾಗೂ ದೇಶ-ವಿದೇಶಗಳಲ್ಲಿರುವ ಪ್ರತಿಯೊಬ್ಬ ಕೊಡವ ಜನಾಂಗದವರನ್ನು ಒಂದೇ ವೇದಿಕೆಯಲ್ಲಿ ತರುವಂತಹ ನಿಟ್ಟಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕಾನೂರು ಕೊಡವ ಸಮಾಜದ ಮುಖಾಂತರ ಪ್ರಯತ್ನಿಸಲಾಗುವದು ಎಂದು ಕಾನೂರು ಕೊಡವ ಸಮಾಜದ ಅಧ್ಯಕ್ಷ ಮಚ್ಚಮಾಡ ಕಂದಾ ಭೀಮಯ್ಯ ತಿಳಿಸಿದರು.

ಕಾನೂರು ಪಾರ್ವತಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಸಮಾಜದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಕೊಡವರು ದೇಶ-ವಿದೇಶಗಳಲ್ಲಿ ನೆಲೆಯನ್ನು ಕಂಡುಕೊಂಡಿದ್ದಾರೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಅಲ್ಲದೆ, ಹೊರ ಜಿಲ್ಲೆಯಲ್ಲೂ ಸಾಕಷ್ಟು ಕೊಡವ ಸಮಾಜಗಳು ನಿರ್ಮಾಣ ವಾಗಿದೆ. ಇದರಲ್ಲಿ ಸೀಮಿತ ಸದಸ್ಯತನವನ್ನು ಪಡೆದುಕೊಳ್ಳಲಾಗು ತ್ತದೆ. ಆದರೆ, ನೂತನವಾಗಿ ಪ್ರಾರಂಭವಾಗುವ ಕಾನೂರು ಕೊಡವ ಸಮಾಜದಲ್ಲಿ ಪ್ರತಿಯೊಬ್ಬ ಕೊಡವರು ಸದಸ್ಯತನವನ್ನು ಪಡೆದುಕೊಳ್ಳಲು ಆರ್ಹರಾಗಿರುತ್ತಾರೆ. ಇದರ ಸದುಪಯೋಗವನ್ನು ಜನಾಂಗ ಭಾಂದವರು ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾನೂರು ಕೊಡವ ಸಮಾಜದ ಮುಖಾಂತರ ಕೊಡವ ಜನಾಂಗದ ಅಭಿವೃದ್ಧಿ, ಅಭ್ಯುದಯ ಹಾಗೂ ಜಿಲ್ಲೆಯ ಮತ್ತು ಜನಾಂಗದ ಸಮಸ್ಯೆಗೆ ಸ್ಪಂದನೆ ನೀಡುವದಲ್ಲದೆ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತಿಸಲಾಗುವದು. ಕೊಡವ ಜನಾಂಗದ ಅಭಿವೃದ್ಧಿ ಮೂಲ ಮಂತ್ರವಾಗಿ ಕಾನೂರು ಕೊಡವ ಸಮಾಜ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಸದಸ್ಯತನ ಹಾಗೂ ದಾಖಲಾತಿ ಪ್ರಾರಂಭವಾಗಿದೆ. ಸುತ್ತ ಮುತ್ತಲಿನ ಕೊಡವ ಜನಾಂಗದ ಪ್ರತಿಯೊಬ್ಬ ಸದಸ್ಯರು ಸದಸ್ಯತನವನ್ನು ಪಡೆದು ಕೊಂಡು ಸಮಾಜದ ಏಳಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.

ನೂತನ ಕಚೇರಿಯನ್ನು ಊರಿನ ಹಿರಿಯರಾದ ಅಳಮೇಂಗಡ ತಮ್ಮಯ್ಯ, ಚೆಪ್ಪುಡಿರ ಸೋಮಯ್ಯ, ಚೆರಿಯಪಂಡ ಅಪ್ಪಯ್ಯ, ಕೇಚಮಾಡ ಗಣೇಶ್ ಹಾಗೂ ಕುಂಞಂಗಡ ರಮೇಶ್ ಸಾಮೂಹಿಕವಾಗಿ ಉದ್ಘಾಟಿಸಿದರು. ಪಾರ್ವತಿ ಕಾಂಪ್ಲೆಕ್ಸ್‍ನ ಮಾಲೀಕ ಅಳಮೇಂಗಡ ಎಂ. ವಿವೇಕ್ ನೂತನ ಕಚೇರಿಗೆ ತಾತ್ಕಾಲಿಕ ಕೊಠಡಿಯನ್ನು ಉದಾರವಾಗಿ ನೀಡಿದ್ದು, ಇದನ್ನು ಮುಕ್ತಕಂಠದಿಂದ ಅಭಿನಂದಿಸಿದರು. ಈ ಸಂದರ್ಭ ಕಾನೂರು ಕೊಡವ ಸಮಾಜ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೇಚಮಾಡ ನಂಜಪ್ಪ, ಸಹ ಕಾರ್ಯದರ್ಶಿ ಚೆನಿಯಪಂಡ ಬೋಪುಣಿ, ಖಜಾಂಚಿ ಸುಳ್ಳಿಮಾಡ ಚಿಣ್ಣಪ್ಪ, ಸದಸ್ಯರಾದ ಚೆರಿಯಪಂಡ ಸೋಮಯ್ಯ, ಚೆರಿಯಪಂಡ ಶ್ಯಾಮ್ ಮುತ್ತಪ್ಪ, ಚೆರಿಯಪಂಡ ಈಶ್ ಬೆಳ್ಯಪ್ಪ, ಒಟ್ಟೆಮಾಡ ಗಣಪತಿ, ಅಳಮೇಂಗಡ ವಿವೇಕ್, ಕೇಚಮಾಡ ವಿಶ್ವಾಸ್, ವಿಶೇಷ ಸಲಹೆಗಾರರಾದ ಅಳಮೇಂಗಡ ತಮ್ಮಯ್ಯ, ಸುಳ್ಳಿಮಾಡ ಎಂ. ನಂಜಪ್ಪ, ಚೆಪ್ಪುಡಿರ ನಂಜಪ್ಪ, ಚೆಪ್ಪುಡಿರ ಮೊಣ್ಣಪ್ಪ ಹಾಗೂ ಊರಿನ ಪ್ರಮುಖರು ಹಾಜರಿದ್ದರು.