ಮಡಿಕೇರಿ, ಸೆ. 24: ಸುಂಟಿಕೊಪ್ಪ ವಾಹನ ಚಾಲಕರ ಸಂಘದ 47ನೇ ವಾರ್ಷಿಕೋತ್ಸವದ ಅಂಗವಾಗಿ ತಾ. 29 ರಂದು ಆಯುಧಾ ಪೂಜಾ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದ್ದು, ಸರಕಾರ 2 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಕೊಡಗು ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಎ. ಉಸ್ಮಾನ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 46 ವರ್ಷಗಳಿಂದ ಅದ್ಧೂರಿಯಾಗಿ ಆಯುಧಾ ಪೂಜಾ ಕಾರ್ಯಕ್ರಮವನ್ನು ಸರಕಾರದ ನೆರವು ಪಡೆಯದೆ ಸಾರ್ವಜನಿಕರು, ದಾನಿಗಳು ಹಾಗೂ ವಿವಿಧ ಸಂಸ್ಥೆಗಳ ನೆರವಿನಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಕೋಮು ಸಾಮರಸ್ಯವನ್ನು ಬಿಂಬಿಸುವ ಈ ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನೆ ಹಾಗೂ ಸ್ವರ್ಧೆಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡಲಾಗಿದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಕ್ರೀಡಾ ಸಾಧಕರನ್ನು, ಶೌರ್ಯ ಪ್ರಶಸ್ತಿ ವಿಜೇತ ಮಕ್ಕಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸುವ ಕಾರ್ಯವನ್ನು ಸಂಘ ಮಾಡುತ್ತಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲ್ಲಿಸಿದ ಮನವಿಗಳಿಗೆ ಸಕಾರಾತ್ಮಕ ಸ್ಪಂದನೆ ಗಣ್ಯರಿಂದ ದೊರೆತ್ತಿದೆ ಎಂದರು. ಈ ವೇದಿಕೆಯ ಮೂಲಕ ಪ್ರಸ್ತಾಪಿಸಲ್ಪಟ್ಟ ಸರಕಾರಿ ಪ್ರೌಢಶಾಲೆ ಸ್ಥಾಪನೆ, ಜೂನಿಯರ್ ಕಾಲೇಜು ಸ್ಥಾಪನೆ, ಸರಕಾರಿ ಆಸ್ಪತ್ರೆ ಉನ್ನತೀಕರಣದಂತಹ ಹಲವು ಕನಸಗಳು ನನಸಾಗಿವೆ. ಸುಂಟಿಕೊಪ್ಪ ಆಯುಧಪೂಜಾ ಸಮಾರಂಭ ಕೇವಲ ಸಾಂಸ್ಕøತಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ ಸಾಮಾಜಿಕ ಕಳಕಳಿಯನ್ನು ಕೂಡ ತೋರುತ್ತಿದೆ. ಆದ್ದರಿಂದ ಸರಕಾರ ಕನಿಷ್ಠ 2 ಲಕ್ಷ ರೂ. ಗಳನ್ನಾದರೂ ಬಿಡುಗಡೆ ಮಾಡಬೇಕೆಂದು ಎಂ.ಎ.ಉಸ್ಮಾನ್ ಒತ್ತಾಯಿಸಿದರು.
ತಾ. 29 ರಂದು ಆಯುಧ ಪೂಜೆ ಕಾರ್ಯಕ್ರಮದ ಪ್ರಯುಕ್ತ ವಿವಿಧ ವಾಹನಗಳ ಅಲಂಕಾರ ಸ್ಪರ್ಧೆ, ಅಂಗಡಿಗಳ ಅಲಂಕಾರ ಸ್ಪರ್ಧೆ, ಸರಕಾರಿ ಮತ್ತು ಸಂಘ, ಸಂಸ್ಥೆಗಳ ಕಚೇರಿಗಳ ಅಲಂಕಾರ ಸ್ಪರ್ಧೆ, ವರ್ಕ್‍ಶಾಪ್‍ಗಳ ಅಲಂಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ದಿನದ ಅಂಗವಾಗಿ ಬ್ಲೂಸ್ಟಾರ್ ಬೀಟ್ಸ್ ವಾಯ್ಸ್ ಆಫ್ ಕೂರ್ಗ್ ತಂಡದಿಂದ ಸಂಗೀತ ರಸಮಂಜರಿ ಹಾಗೂ ಮೈಸೂರಿನ ಖ್ಯಾತ ಜಾದೂಗಾರ ಜಗ್ಗುರವರ ಜಾದೂ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಕೆದಕಲ್‍ನ ಯೂತ್ ಫೆಡರೇಷನ್‍ನಿಂದ ಮಂಟಪದ ಚಲನವಲನ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಂದು ರಾತ್ರಿ 9.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ. ಖಾದರ್, ಜಿ.ಪಂ. ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಪಿ.ಎಂ. ಲತೀಫ್, ಕುಮುದಾ ಧರ್ಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಮಾಜಿ ಸಚಿವ ಬಿ.ಎ. ಜೀವಿಜಯ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರಪತಿ ಪದಕಗಳಿಸಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಅವರನ್ನು ಸನ್ಮಾನಿಸಲಾಗುವದು ಎಂದು ಉಸ್ಮಾನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಎ. ಪೂವಪ್ಪ, ಉಪಾಧ್ಯಕ್ಷ ಬಿ.ಎ. ಕೃಷ್ಣಪ್ಪ, ಸದಸ್ಯರುಗಳಾದ ಸುರೇಶ್ ಹಾಗೂ ಹುಸೈನರ್ ಉಪಸ್ಥಿತರಿದ್ದರು.