ಕುಶಾಲನಗರ, ಸೆ. 24: 12 ದಿನಗಳಿಂದ ನಡೆಯುತ್ತಿದ್ದ ಕಾವೇರಿ ಮಹಾಪುಷ್ಕರ ಸ್ನಾನಾಚರಣೆ ಕಾರ್ಯಕ್ರಮಗಳಿಗೆ ಇಂದು ತೆರೆ ಬಿತ್ತು. ಮೂಲ ಕಾವೇರಿ ತಲಕಾವೇರಿ ಕ್ಷೇತ್ರದಿಂದ ಸಮುದ್ರ ಸಂಗಮವಾಗುವ ಪೂಂಪ್ಹಾರ್ ತನಕ ಕೋಟ್ಯಾಂತರ ಭಕ್ತಾದಿಗಳು ಪವಿತ್ರ ನದಿ ಸ್ನಾನ ಹಾಗೂ ಜೀವನದಿಗೆ ಮಹಾ ಆರತಿ ಬೆಳಗುವದರೊಂದಿಗೆ 12 ವರ್ಷಕ್ಕೊಮ್ಮೆ ಬರುವ ಪುಷ್ಕರದಲ್ಲಿ ಜಾತಿ, ಬೇಧ ಎನ್ನದೆ ಭಕ್ತಿ ಭಾವದಿಂದ ಭಕ್ತರು ಸ್ನಾನಾಚರಣೆಯಲ್ಲಿ ತೊಡಗಿಸಿಕೊಂಡ ದೃಶ್ಯ ಕಂಡುಬಂತು.
ಜಿಲ್ಲೆಯ ಬೆರಳೆಣಿಕೆಯ ಭಕ್ತಾದಿಗಳು, ದಕ್ಷಿಣ ಭಾರತದ ಆಂಧ್ರ, ತಮಿಳುನಾಡು ಮತ್ತಿತರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಈ ವಿಶೇಷ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಲಕ್ಷಗಟ್ಟಲೆ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಳ್ಳುವಿಕೆಯಿಂದ ಪುಷ್ಕರ ಕಾರ್ಯಕ್ರಮ ಬಹು ಅದ್ದೂರಿಯಿಂದ ನಡೆದು ಗಂಗಾ ಆರತಿಯಂತೆ ಜೀವನದಿ ಕಾವೇರಿಗೆ ಕೂಡ ಮಹಾ ಆರತಿಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತಮಿಳುನಾಡಿನ ಭಾಗದ ನದಿಯಲ್ಲಿ ಕಳೆದ ಎರಡು ವರ್ಷಗಳಿಂದ ನೀರಿನ ಹರಿವು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೆಲವೆಡೆ ನದಿಗೆ ಬೋರ್ವೆಲ್ ನೀರು ಹರಿಸಿ ಭಕ್ತರು ಪುಷ್ಕರ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರೆ, ಈ ನಡುವೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಸರಕಾರದ ಸಚಿವರುಗಳು ಸ್ನಾನಾಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭ ಮೆಟ್ಟೂರು ಜಲಾಶಯದಿಂದ ಕೆಲವು ದಿನಗಳ ಕಾಲ ನದಿಗೆ ನೀರು ಹರಿಸಲು ಕೂಡ ಅಲ್ಲಿನ ಸರಕಾರ ಕ್ರಮ ಕೈಗೊಂಡಿತ್ತು.