ಸೋಮವಾರಪೇಟೆ, ಸೆ.24 : ವರ್ಷಪೂರ್ತಿ ವಾಹನದ ಬಾಡಿಗೆ, ವರ್ಕ್‍ಶಾಪ್‍ಗಳಲ್ಲಿ ಕೆಲಸ ಕಾರ್ಯ ಮಾಡುತ್ತಾ ಜೀವನದ ಬಂಡಿ ನೂಕುತ್ತಿರುವ ಚಾಲಕರು ಮತ್ತು ವರ್ಕ್‍ಶಾಪ್ ಕೆಲಸಗಾರರು ಇಂದು ತಮ್ಮೆಲ್ಲಾ ಕೆಲಸಗಳನ್ನೂ ಬದಿಗಿಟ್ಟು ಮೈದಾನದಲ್ಲಿ ಕ್ರೀಡಾಸ್ಪೂರ್ತಿಯೊಂದಿಗೆ ಸಂಭ್ರಮಿಸಿದರು.
ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಆಶ್ರಯದಲ್ಲಿ ಆಯೋಜಿಸುತ್ತಿರುವ ಅದ್ದೂರಿ ಆಯುಧ ಪೂಜೆ ಅಂಗವಾಗಿ ಸಂಘದ ಸದಸ್ಯರಿಗೆ ಇಂದು ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ವಿವಿಧ ಕ್ರೀಡಾಕೂಟದಲ್ಲಿ ಸದಸ್ಯರು ಸಂಭ್ರಮದಿಂದ ಪಾಲ್ಗೊಂಡರು.
ಬೆಳಿಗ್ಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಸದಸ್ಯರಿಗೆ ಕ್ರೀಡಾಕೂಟ ಆಯೋಜಿಸಿಕೊಂಡು ಬರುತ್ತಿರುವದು ಶ್ಲಾಘನೀಯ ಕೆಲಸ. ಒತ್ತಡದ ಬದುಕಿನಲ್ಲಿ ಕ್ರೀಡಾಕೂಟಗಳು ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸಲು ಸಹಕಾರಿಯಾಗಿದ್ದು, ಎಲ್ಲರೂ ಒಂದೆಡೆ ಕಲೆಯುವದರಿಂದ ಪರಸ್ಪರ ಬಾಂಧವ್ಯವೂ ಗಟ್ಟಿಗೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಸಿ. ನಂದ ವಹಿಸಿದ್ದರು. ಈ ಸಂದರ್ಭ ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರಳೀಧರ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ಮೋಟಾರ್ ಯೂನಿಯನ್ ಉಪಾಧ್ಯಕ್ಷ ಪರಮೇಶ್, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಜಂಟಿ ಕಾರ್ಯದರ್ಶಿ ಚನ್ನಪ್ಪ, ಪ್ರಕಾಶ್, ಖಜಾಂಚಿ ಖಾದರ್, ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿ ಸಂಚಾಲಕ ವಿನ್ಸಿ ಡಿಸೋಜ ಉಪಸ್ಥಿತರಿದ್ದರು.
ಸಂಘದ ಸದಸ್ಯರುಗಳಿಗೆ ಹಗ್ಗಜಗ್ಗಾಟ, ಕಬಡ್ಡಿ, 100 ಮೀಟರ್ ಓಟ, ಭಾರದ ಗುಂಡು ಎಸೆತ, ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ನಡೆದವು. ತಾ. 29ರಂದು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಜರುಗುವ ಆಯುಧ ಪೂಜೋತ್ಸವ ಸಮಾರಂಭದಲ್ಲಿ ವಿಜೇತರುಗಳಿಗೆ ಬಹುಮಾನ ವಿತರಿಸಲಾಗುವದು ಎಂದು ಸಿ.ಸಿ. ನಂದ ತಿಳಿಸಿದರು.