ಮಡಿಕೇರಿ, ಸೆ. 24: ನಾಪೆÇೀಕ್ಲುವಿನ ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ರಸ್ತೆ ಕಳೆದ ಇಪ್ಪತ್ತು ವರ್ಷಗಳಿಂದ ದುರಸ್ತಿ ಕಾಣದೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಇತ್ತೀಚೆಗೆ ರಸ್ತೆ ಅಭಿವೃದ್ಧಿಗಾಗಿ ಒತ್ತಾಯಿಸಿ ಗ್ರಾಮಸ್ಥರು ನಡೆಸಿದ ಹೋರಾಟವನ್ನು ನಾಪೋಕ್ಲು ಗ್ರಾ.ಪಂ. ನಿರ್ಲಕ್ಷಿಸಿರುವದರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ನಾಗರಿಕ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ಕಾರ್ಯದರ್ಶಿ ಪರವಂಡ ಜುóಬೇರ್ ರಸ್ತೆ ದುರವಸ್ಥೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಸೆಳೆದಿದ್ದರೂ ಯಾವದೇ ಸ್ಪಂದನ ದೊರೆತ್ತಿಲ್ಲವೆಂದು ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ಪ್ರತಿಭಟನೆಯನ್ನು ರಾಜಕೀಯ ದುರುದ್ದೇಶದ ಪ್ರತಿಭಟನೆ ಎಂದು ಗ್ರಾ.ಪಂ. ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ. ಗ್ರಾಮದ ಜನರ ಭಾವನೆಗೆ ಗೌರವ ನೀಡದೆ ಇರುವ ಗ್ರಾ.ಪಂ. ಸದಸ್ಯರು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸುಮಾರು ರೂ. 40 ಲಕ್ಷ ವೆಚ್ಚದಲ್ಲಿ ನಡೆದಿರುವ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ತೇಪೆ ಹಾಕುವ ಕಾರ್ಯವನ್ನಷ್ಟೇ ಮಾಡಲಾಗಿದೆ. ಈ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿರುವ ಜುóಬೇರ್ ಗ್ರಾ.ಪಂ. ಸದಸ್ಯರು ಹಾಗೂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ “ನಮ್ಮ ನಾಡು ನಮ್ಮ ರಸ್ತೆ, ಭಿಕ್ಷೆಯಲ್ಲ, ಇದು ನಮ್ಮ ಹಕ್ಕು” ಘೋಷ ವಾಕ್ಯದೊಂದಿಗೆ ಚೆರಿಯಪರಂಬುವಿನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ “ಮಡಿಕೇರಿ ಚಲೋ” ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುವದು ಮತ್ತು ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗುವದೆಂದು ಜುóಬೇರ್ ಎಚ್ಚರಿಕೆ ನೀಡಿದ್ದಾರೆ.

ನಾಪೋಕ್ಲು, ಅಜ್ಜಿಮಟ್ಟ ಮೂಲಕ ವೆಂಕಟರಮಣ ದೇವಸ್ಥಾನಕ್ಕೆ ತೆರಳುವ ರಸ್ತೆ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು, ನಾಪೋಕ್ಲು ಸಂತೆಯಿಂದ ದರ್ಗಾ ಶರೀಫ್‍ಗೆ ತೆರಳುವ ರಸ್ತೆ ಕಾಮಗಾರಿ, ಚೆರಿಯಪರಂಬು ಮತ್ತು ಕಲ್ಲುಮೊಟ್ಟೆಗೆ ತೆರಳುವ ರಸ್ತೆ, ಚೆರಿಯಪರಂಬು ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆ, ಮರ್ಕಜ್ó ಹಿದಾಯ ಹೆಣ್ಣು ಮಕ್ಕಳ ವಸತಿ ನಿಲಯದ ರಸ್ತೆ ದುರಸ್ತಿ, ಕಲ್ಲುಮೊಟ್ಟೆಯಿಂದ ವೆಂಕಟರಮಣ ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು, ಕಸದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಸಂದರ್ಭ ಒತ್ತಾಯಿಸಲಾಗುವದೆಂದು ಹೇಳಿದ್ದಾರೆ.