ಸೋಮವಾರಪೇಟೆ,ಸೆ.24: ದೇಶದಲ್ಲಿರುವ ಶೇ.14ರಷ್ಟು ಮಂದಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವದು ಹೆಮ್ಮೆಯ ವಿಚಾರ ವಾಗಿದ್ದು, ಸೋಮವಾರಪೇಟೆಯ ಲ್ಲಿರುವ ವಿಎಸ್‍ಎಸ್‍ಎನ್ ಬ್ಯಾಂಕ್ ವ್ಯಾಪ್ತಿಗೆ ಒಳಪಡುವ ಜನಸಂಖ್ಯೆಯಲ್ಲಿ ಶೇ.45ರಷ್ಟು ಮಂದಿ ಸಹಕಾರಿ ಗಳಾಗಿದ್ದಾರೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಮೀಪದ ಬಳಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಾಖಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೋಮವಾರಪೇಟೆ ಪ್ರಾ.ಕೃ.ಪ.ಸ. ಸಂಘವು 200 ಕೋಟಿಯಷ್ಟು ಆರ್ಥಿಕ ವಹಿವಾಟು ನಡೆಸಿದ್ದು, 117 ಕೋಟಿ ಸಾಲ ಪಡೆಯುವ ಅರ್ಹತೆಯನ್ನು ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬಾರದು. ಈ ಕ್ಷೇತ್ರವನ್ನು ಉಳಿಸಲು ಸರ್ಕಾರ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ಮಾತನಾಡಿ, ಕರ್ನಾಟಕದಲ್ಲಿ ಮೊದಲನೇ ಸಹಕಾರ ಸಂಘ ಗದಗ್‍ನಲ್ಲಿ ಪ್ರಾರಂಭವಾಗಿದ್ದರೆ, ಒಂದು ದಿನದ ನಂತರ ಸೋಮವಾರಪೇಟೆಯ ತಲ್ತರೆಶೆಟ್ಟಳ್ಳಿ ಯಲ್ಲಿ 2ನೇ ಸಹಕಾರ ಸಂಘ ಪ್ರಾರಂಭ ವಾಗಿದ್ದು ತಾಲೂಕಿಗೆ ಹೆಮ್ಮೆಯ ವಿಷಯ ಎಂದರು.
ವೇದಿಕೆಯಲ್ಲಿ ಸಂಘದ ಹಿರಿಯ ಸದಸ್ಯ ಬಿ.ಹೆಚ್. ಬಿದ್ದಪ್ಪ, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಮಾರಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಹೆಚ್.ಡಿ. ರವಿಕುಮಾರ್, ನಿರ್ದೇಶಕರುಗಳಾದ ಕೆ.ಎಸ್. ದಾಸಪ್ಪ, ಲಕ್ಷ್ಮೀಕಾಂತ್, ಬಿ.ಎಂ. ಸುರೇಶ್, ಜಿ.ಬಿ. ಸೋಮಯ್ಯ, ಎಸ್.ಎನ್. ಸೋಮಶೇಖರ್ ಅವರುಗಳು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರುಗಳಾದ ಕೆ.ಜಿ. ಸುರೇಶ್ ನಿರೂಪಿಸಿದರೆ, ನಳಿನಿ ಗಣೇಶ್ ಪ್ರಾರ್ಥಿಸಿ, ಸುಮಾ ಸುದೀಪ್ ಸ್ವಾಗತಿಸಿದರು. ರೂಪ ಸತೀಶ್ ವಂದಿಸಿದರು.