ಸೋಮವಾರಪೇಟೆ, ಸೆ. 24: ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ವರ್ಷ ರೂ. 18.68 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಹೇಳಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಸದಸ್ಯರಿಗೆ ಹಲವು ಸೌಲಭ್ಯಗಳನ್ನು ಒದಗಿಸಿದ್ದು, ಈವರೆಗೆ ಒಟ್ಟು ಶೇ. 98 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಪಡೆದಿದ್ದ ಸಾಲವನ್ನು ಸಂಪೂರ್ಣ ವಾಗಿ ಹಿಂದಿರುಗಿಸಿದೆ. ಉತ್ತಮ ವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಪ್ರಥಮ ಬಹುಮಾನವಾಗಿ ರೂ. 15ಸಾವಿರ ನಗದು ಬಹುಮಾನ ಗಳಿಸಿದೆ ಎಂದು ಹೇಳಿದರು.

ಸಂಘದ ಸದಸ್ಯರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಬೆಳೆವಿಮೆ ಪಾವತಿಸಿದ ರೈತರಿಗೆ ಯಾವದೇ ಉಪಯೋಗ ವಾಗಿಲ್ಲ. ಇದನ್ನು ರದ್ದು ಪಡಿಸಬೇಕು. ರಾಜ್ಯದಲ್ಲಿನ ಸಹಕಾರ ಸಂಘಗಳೆಲ್ಲವೂ ಒಗ್ಗೂಡಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ರೈತರು ಪಾವತಿಸುವ ಬೆಳೆವಿಮೆಗೆ ಯಾವದೇ ಬೆಳೆಪರಿಹಾರ ಲಭಿಸುತ್ತಿಲ್ಲ. ಈ ಹೊರೆಯನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರುಗಳು ಒತ್ತಾಯಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಜಾನಕಿ ವೆಂಕಟೇಶ್, ಸದಸ್ಯರಾದ ಎಲ್.ಜಿ. ಮದನ್, ವೈ.ಎಂ. ನಾಗರಾಜು, ಎಸ್.ಬಿ. ಈರಪ್ಪ, ಕವಿತಾ ವಿರೂಪಾಕ್ಷ, ಕೆ.ಪಿ. ಭಾನುಪ್ರಕಾಶ್, ಡಿ.ಸಿ. ರಾಜು, ಕೆ.ಎಸ್. ವಿಜಯ, ಎಚ್.ಎಲ್. ವಿಜೇಂದ್ರ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೈ.ಪಿ. ಹರೀಶ್ ಉಪಸ್ಥಿತರಿದ್ದರು.