ಮಡಿಕೇರಿ, ಸೆ. 24: ಪ್ರಸ್ತುತದ ಆಧುನಿಕ ಪ್ರಪಂಚದಲ್ಲಿ ಇಂಟರ್ನೆಟ್ ಮಾಹಿತಿಗಳು, ಮತ್ತಿತರ ಯಾವದೇ ಮಾಹಿತಿಗಳು ಲಭ್ಯವಾಗುತ್ತಿದ್ದರೂ ಜನತೆಯ ನಂಬಿಕೆಗೆ ಅಧಿಕೃತ ಆಧಾರವಾಗುತ್ತಿರುವದು ಪುಸ್ತಕಗಳು, ಅಧ್ಯಯನ ಗ್ರಂಥಗಳು ಎಂದು ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಸರಾ ಹಬ್ಬದ ಅಂಗವಾಗಿ ನಗರದ ಗಾಂಧಿಮೈದಾನದಲ್ಲಿ ಎರಡನೇ ವರ್ಷದ ಪುಸ್ತಕ ಸಂತೆಯನ್ನು ಏರ್ಪಡಿಸಲಾಗಿದ್ದು, ಇದನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಪರಿಷತ್ನ ಈ ಪ್ರಯತ್ನ ಸ್ವಾಗತಾರ್ಹವೂ, ಅರ್ಥಪೂರ್ಣವೂ ಆಗಿದೆ. ಪ್ರಸ್ತುತದ ದಿನಗಳಲ್ಲಿ ಟಿ.ವಿ. ವೀಕ್ಷಣೆ, ಧಾರಾವಾಹಿಗಳ ವೀಕ್ಷಣೆಯಲ್ಲೇ ಜನತೆ ಕಾಲಕಳೆಯುವ ಪರಿಸ್ಥಿತಿ ಕಂಡುಬರುತ್ತಿದೆ. ಇಂತಹ ಸನ್ನಿವೇಶದಲ್ಲಿ ಪುಸ್ತಕಗಳನ್ನು ಓದಲು ಪ್ರೇರೇಪಿಸುವ ಈ ಕೆಲಸ ಮಹತ್ವದ್ದಾಗಿದೆ ಎಂದು ರಾಜೇಂದ್ರ ಅವರು ಹೇಳಿದರು.
ಅತಿಥಿಗಳಾಗಿದ್ದ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಮಾತನಾಡಿ, ಅಕ್ಷರಮಾತೆ ಸರಸ್ವತಿ ದೇವಿಯ
(ಮೊದಲ ಪುಟದಿಂದ) ವಿಷಯವನ್ನು ಮುಂದಿಟ್ಟು ಪುಸ್ತಕದ ಮಹತ್ವ, ಜ್ಞಾನಾರ್ಜನೆಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಕ.ಸಾ.ಪ. ವತಿಯಿಂದ ಯುವ ಜನತೆಯಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಕಳೆದ ವರ್ಷದಿಂದ ದಸರಾ ಉತ್ಸವದಲ್ಲಿ ಪುಸ್ತಕ ಸಂತೆಯನ್ನು ಆರಂಭಿಸಲಾಗಿದೆ ಎಂದರು. ಅತಿಥಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಹಿರಿಯ ಪತ್ರಕರ್ತ ಬಿ.ಸಿ. ದಿನೇಶ್, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಕುಡೆಕಲ್ ಸಂತೋಷ್ ಪಾಲ್ಗೊಂಡಿದ್ದರು.
ಮಡಿಕೇರಿ ತಾಲೂಕು ಕ.ಸಾ.ಪ. ಕಾರ್ಯದರ್ಶಿ ಕೂಡಕಂಡಿ ದಯಾನಂದ ಸ್ವಾಗತಿಸಿ, ಕ.ಸಾ.ಪ. ಪದಾಧಿಕಾರಿ ಶಿಕ್ಷಕಿ, ಚೋಕಿರ ಅನಿತಾ ದೇವಯ್ಯ ಕಾರ್ಯಕ್ರಮ ನಿರೂಪಿಸಿದರು. ಕ.ಸಾ.ಪ. ಮೂರ್ನಾಡು ಹೋಬಳಿ ಅಧ್ಯಕ್ಷ ಎಸ್.ಡಿ. ಪ್ರಶಾಂತ್ ವಂದಿಸಿದರು. ಪುಸ್ತಕ ಸಂತೆಯಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.